ಅಡ್ಯಾರ್‌ಪದವಿನಲ್ಲಿ ಘರ್ಷಣೆ: ಆರಾಧನಾಲಯಗಳಿಗೆ ಕಲ್ಲು ತೂರಾಟ
ಕೆಲವರಿಗೆ ಗಾಯ

ಮಂಗಳೂರು, ಮೇ 15: ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರ್‌ಪದವಿನಲ್ಲಿ ಪಟಾಕಿ ಸಿಡಿಸಿದ ವಿಷಯಕ್ಕೆ ಸಂಬಂಧಿಸಿ ಘರ್ಷಣೆ ಉಂಟಾಗಿ ಆರಾಧನಾಲಯಗಳಿಗೆ ಕಲ್ಲು ಎಸೆದ ಘಟನೆ ನಡೆದಿದೆ.
ಘಟನೆಯಲ್ಲಿ ಕೆಲವರಿಗೆ ಗಾಯವಾಗಿದೆ. ಮಂಗಳವಾರ ರಾತ್ರಿ 8 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ವಿಜಯೋತ್ಸವದ ಸಂದರ್ಭದಲ್ಲಿ ಮಸೀದಿಯ ಮುಂದೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿದ್ದರಿಂದ ಉಂಟಾದ ಮಾತುಕತೆಯು ವಿಕೋಪಕ್ಕೆ ತಿರುಗಿದೆ. ಇದರಿಂದಾಗಿ ಕೆರಳಿದ ಕಾರ್ಯಕರ್ತರು ಮಸೀದಿಗೆ ಕಲ್ಲೆಸೆದಿದ್ದು, ಗಾಜು ಒಡೆದು ಹಾನಿಯಾಗಿದೆ ಎಂದು ದೂರಲಾಗಿದೆ. ಬಳಿಕ ಅಲ್ಲೇ ಹತ್ತಿರದಲ್ಲಿದ್ದ ದೇವಸ್ಥಾನಕ್ಕೆ ಕಲ್ಲು ತೂರಾಟ ನಡೆದಿದೆ. ಈ ಸಂದರ್ಭ ಮಂದಿರದ ಬಳಿ ಅಳವಡಿಸಲಾಗಿದ್ದ ಬೋರ್ಡ್‌ಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.
ಘಟನೆಯಲ್ಲಿ ಅಡ್ಯಾರ್‌ಪದವಿನ ನಿವಾಸಿಗಳಾದ ಸಫ್ವಾನ್, ವನಜಾಕ್ಷ, ಅಶೋಕ್, ಅರುಣ್, ಅಭಿಜಿತ್ ಎಂಬವರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಡ್ಯಾರ್‌ಪದವಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.





