ಅಣ್ಣ-ತಮ್ಮ, ಅಪ್ಪ-ಮಕ್ಕಳಿಗೆ ಸೋಲು-ಗೆಲುವಿನ ಕಹಿ-ಸಿಹಿ
ರಾಜ್ಯ ವಿಧಾನಸಭಾ ಚುನಾವಣೆ

ಬೆಂಗಳೂರು, ಮೇ 15: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಣ್ಣ-ತಮ್ಮಂದಿರು, ಅಪ್ಪ-ಮಕ್ಕಳು ಹಾಗೂ ಸಂಬಂಧಿಕರಲ್ಲಿ ಕೆಲವರು ಸೋಲು ಕಂಡಿದ್ದರೆ, ಮತ್ತೆ ಕೆಲವರು ಗೆಲುವಿನ ನಗೆ ಬೀರಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರು ಪ್ರತಿನಿಧಿಸುತ್ತಿದ್ದ ಸೊರಬ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಅವರನ್ನು ಗೆಲ್ಲಿಸಿರುವ ಮತದಾರರು, ಅವರ ತಮ್ಮ ಮಧುಬಂಗಾರಪ್ಪಗೆ ಸೋಲಿನ ರುಚಿ ತೋರಿಸಿದ್ದಾರೆ. ಬೆಳಗಾವಿ ಭಾಗದಲ್ಲಿ ಅರಬಾವಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ, ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸತೀಶ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ.
ಬಾಲಚಂದ್ರ ಜಾರಕಿಹೊಳಿ ಜೆಡಿಎಸ್‌ನ ಭೀಮಪ್ಪ ಗುಂಡಪ್ಪ ಅವರನ್ನು ಸೋಲಿಸಿದರೆ, ಸತೀಶ್ ಜಾರಕಿಹೊಳಿ ಬಿಜೆಪಿಯ ಮಾರುತಿ ಮಲ್ಲಪ್ಪಗೆ ಸೋಲಿನ ರುಚಿ ತೋರಿಸಿದ್ದಾರೆ. ಬಾಲ್ಕಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಈಶ್ವರ ಖಂಡ್ರೆ ಅವರು, ಜೆಡಿಎಸ್‌ನ ಸೋದರ ಸಂಬಂಧಿ ಪ್ರಕಾಶ್ ಖಂಡ್ರೆಯನ್ನು ಸೋಲಿಸಿದ್ದಾರೆ.
ಬೆಂಗಳೂರಿನ ಹೆಬ್ಬಾಳ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಭೈರತಿ ಸುರೇಶ್ ಹಾಗೂ ಕೆ.ಆರ್.ಪುರಂನ ಕಾಂಗ್ರೆಸ್ ಅಭ್ಯರ್ಥಿ ಭೈರತಿ ಬಸವರಾಜು ಗೆಲುವು ಸಾಧಿಸಿದ್ದು, ಇವರಿಬ್ಬರು ಸಂಬಂಧಿಕರಾಗಿದ್ದಾರೆ. ಇವರ ಮತ್ತೊಬ್ಬ ಸಂಬಂಧಿ ಮಾಜಿ ಉಪಮೇಯರ್ ಆರ್.ಶಂಕರ್ ರಾಣೆಬೆನ್ನೂರು ಕ್ಷೇತ್ರದಲ್ಲಿ ಕೆಪಿಜೆಪಿ ಅಭ್ಯರ್ಥಿಯಾಗಿ ಗೆಲುವಿನ ನಗೆ ಬೀರಿದ್ದಾರೆ.
ಜೆಡಿಎಸ್‌ನ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಚೆನ್ನಪಟ್ಟಣ ಹಾಗೂ ರಾಮನಗರದಲ್ಲಿ ಜಯಗಳಿಸಿದ್ದರೆ, ಅವರ ಅಣ್ಣ ಎಚ್.ಡಿ.ರೇವಣ್ಣ ಹೊಳೆನರಸೀಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಇವರ ಜೊತೆಗೆ ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿಯ ಸೋಮಶೇಖರರೆಡ್ಡಿ ಹಾಗೂ ಅವರ ಅಣ್ಣ ಕರುಣಾಕರರೆಡ್ಡಿ ಬಿಜೆಪಿಯಿಂದ ಹರಪ್ಪನಹಳ್ಳಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಿಲ್‌ಲಾಡ್ ಹಾಗೂ ಕಲಘಟಗಿಯಿಂದ ಸ್ಪರ್ಧಿಸಿದ್ದ ಅವರ ಸೋದರ ಸಂತೋಷ್ ಲಾಡ್ ಸೋಲುಂಡಿದ್ದಾರೆ.
ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ ಸೋಲು ಕಂಡಿದ್ದರೆ, ಅವರ ತಂದೆ ಶಾಮನೂರು ಶಿವಶಂಕರಪ್ಪ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ನಿಪ್ಪಾಣಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಶಿಕಲಾ ಜೊಲ್ಲೆ ಜಯಗಳಿಸಿದ್ದರೆ, ಅವರ ಪತಿ ಚಿಕ್ಕೋಡಿ ಸದಲಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋಲುಂಡಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಎಂ.ಕೃಷ್ಣಪ್ಪ ಜಯಗಳಿಸಿದ್ದರೆ, ಅವರ ಪುತ್ರ ಪ್ರಿಯಕೃಷ್ಣ ಗೋವಿಂದರಾಜನಗರ ಕ್ಷೇತ್ರದಲ್ಲಿ ಸೋತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಕಂಡು ಬದಾಮಿಯಲ್ಲಿ ಗೆಲುವು ಸಾಧಿಸಿದ್ದರೆ, ಅವರ ಪುತ್ರ ಯತೀಂದ್ರ ವರುಣಾದಲ್ಲಿ ಗೆಲುವಿನ ನಗೆ ಬೀರಿದ್ದಾರೆ.







