ಉತ್ತರಾಖಂಡದಲ್ಲೊಂದು ‘ಹಾದಿಯಾ’ ಪ್ರಕರಣ
ಪತ್ನಿಯನ್ನು ಹೆತ್ತವರ ಬಂಧನದಿಂದ ಪಾರುಗೊಳಿಸಲು ಪತಿಯ ಕೋರಿಕೆ

ಸಾಂದರ್ಭಿಕ ಚಿತ್ರ
ನೈನಿತಾಲ್, ಮೇ 15: ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ತನ್ನ ಪತ್ನಿಯನ್ನು ಆಕೆಯ ಪೋಷಕರ ‘ಬಂಧನದಿಂದ ಬಿಡುಗಡೆಗೊಳಿಸಬೇಕೆಂಬ’ ಪತಿಯ ಕೋರಿಕೆ ಹಿನ್ನೆಲೆಯಲ್ಲಿ, ಮಹಿಳೆಯನ್ನು ಬುಧವಾರ ನ್ಯಾಯಾಲಯದೆದುರು ಹಾಜರುಪಡಿಸುವಂತೆ ಸುಪ್ರೀಂಕೋರ್ಟ್ ಉತ್ತರಾಖಂಡ ಪೊಲೀಸರಿಗೆ ಸೂಚಿಸಿದೆ.
ಹಲ್ದ್ವಾನಿ ಗ್ರಾಮದ ನಿವಾಸಿಗಳಾದ ಮುಹಮ್ಮದ್ ದಾನಿಷ್ ಹಾಗೂ ಶ್ವೇತಾ ಭಿಸ್ಟ್ ಎಂಬ ಯುವತಿ ಭೀಮ್ತಾಲ್ನಲ್ಲಿ ಬಿಬಿಎಂ ಪದವಿ ವಿದ್ಯಾರ್ಥಿಗಳಾಗಿದ್ದ ಸಂದರ್ಭ ಪರಸ್ಪರರ ಮಧ್ಯೆ ಪ್ರೇಮಾಂಕುರವಾಗಿತ್ತು. ಇವರ ಪ್ರೀತಿಗೆ ಯುವತಿಯ ಪೋಷಕರ ವಿರೋಧವಿದ್ದ ಕಾರಣ, ಶ್ವೇತಾ ಸ್ವಇಚ್ಛೆಯಿಂದ ಇಸ್ಲಾಂಗೆ ಮತಾಂತರಗೊಂಡು ತನ್ನ ಹೆಸರನ್ನು ಆಯಿಷಾ ಎಂದು ಬದಲಿಸಿಕೊಂಡಿದ್ದಳು. ಅಲ್ಲದೆ ಗಾಝಿಯಾಬಾದ್ನಲ್ಲಿ ರಿಜಿಸ್ಟರ್ಡ್ ಮದುವೆಯಾಗಿದ್ದರು. ತಮ್ಮ ಮಗಳನ್ನು ದಾನಿಷ್ ಅಪಹರಿಸಿದ್ದಾನೆ ಎಂದು ಯುವತಿಯ ಪೋಷಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಉತ್ತರಾಖಂಡ ಪೊಲೀಸರು ದಿಲ್ಲಿಯಲ್ಲಿದ್ದ ದಂಪತಿಯನ್ನು ಬಂಧಿಸಿದ್ದರು. ತಾವಿಬ್ಬರು ರಿಜಿಸ್ಟರ್ಡ್ ಮದುವೆಯಾಗಿದ್ದೇವೆ ಎಂಬ ದಾನಿಷ್ ಹೇಳಿಕೆಯನ್ನು ತಿರಸ್ಕರಿಸಿದ್ದ ಪೊಲೀಸರು, ಆತ ಸಲ್ಲಿಸಿದ್ದ ಮದುವೆ ಪ್ರಮಾಣಪತ್ರ ಹಾಗೂ ‘ನಿಖಾಹ್ನಾಮ’ ನಕಲಿಯಾಗಿದ್ದು, ಇದು ಅಪಹರಣ ಪ್ರಕರಣವಾಗಿದೆ ಎಂದು ತಿಳಿಸಿ ಆತನನ್ನು ಬಂಧಿಸಿದ್ದರು.
ಎಪ್ರಿಲ್ 20ರಿಂದ ದಾನಿಷ್ ಹಲ್ದ್ವಾನಿ ಜೈಲಿನಲ್ಲಿದ್ದಾನೆ. ಈ ಮಧ್ಯೆ, ಪೋಷಕರ ಜೊತೆಗಿದ್ದ ಆಯಿಷಾ, ಐಜಿಪಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗೆ ಈಮೇಲ್ ಮೂಲಕ ಕಳಿಸಿದ್ದ ಪತ್ರದಲ್ಲಿ, ತಾವಿಬ್ಬರು ಮದುವೆಯಾಗಿದ್ದು ತಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ತಿಳಿಸಿದ್ದಳು. ಬಳಿಕ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ದಾನಿಷ್, ತನ್ನ ಪತ್ನಿಯನ್ನು ಆಕೆಯ ಪೋಷಕರ ಬಂಧನದಿಂದ ಬಿಡುಗಡೆಗೊಳಿಸಿ ತಮ್ಮಿಬ್ಬರನ್ನು ಮತ್ತೆ ಒಂದುಗೂಡಿಸಬೇಕೆಂದು ಕೋರಿಕ ಸಲ್ಲಿಸಿದ್ದ. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠವು, ಆಯಿಷಾಳನ್ನು ಬುಧವಾರ ಸುಪ್ರೀಂಕೋರ್ಟ್ ಎದುರು ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದೆ.
ಯುವತಿಯೊಡನೆ ಮಾತನಾಡಿ ಆಕೆಯ ಇಚ್ಛೆಯನ್ನು ತಿಳಿದುಕೊಳ್ಳಬೇಕಿದೆ. ಆಕೆಗೆ ಹೆತ್ತವರೊಡನೆ ಬಾಳಲು ಇಷ್ಟವಿದೆಯೇ ಎಂದು ಆಕೆಯಿಂದಲೇ ತಿಳಿದುಕೊಳ್ಳಬೇಕು ಎಂದು ನ್ಯಾ. ದೀಪಕ್ ಮಿಶ್ರಾ ತಿಳಿಸಿದ್ದಾರೆ. ಕೇರಳದಲ್ಲಿ ನಡೆದಿದ್ದ ಇದೇ ರೀತಿಯ ಪ್ರಕರಣದಲ್ಲಿ ಕಳೆದ ಮಾರ್ಚ್ನಲ್ಲಿ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಇಸ್ಲಾಂಗೆ ಮತಾಂತರಗೊಂಡು ಮದುವೆಯಾಗಿದ್ದ ಹಾದಿಯಾ ಎಂಬ ಯುವತಿ ತನ್ನಿಷ್ಟದಂತೆ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಿತ್ತು.







