ಲಾಲಾಜಿ ಗೆಲುವು: ಬಿಜೆಪಿ ಸಂಭ್ರಮ ಆಚರಣೆ

ಕಾಪು, ಮೇ 15: ಕಳೆದ ಚುನಾವಣೆಯಲ್ಲಿ 1800 ಮತಗಳ ಅಂತರದಿಂದ ಕಾಂಗ್ರೆಸ್‌ನ ವಿನಯಕುಮಾರ್ ಸೊರಕೆಯವರಿಂದ ಸೋಲು ಕಂಡಿದ್ದ ಬಿಜೆಪಿಯ ಲಾಲಾಜಿ ಮೆಂಡನ್ ಈ ಬಾರಿ 11,736 ಮತಗಳ ಅಂತರದಿಂದ ಜಯ ಪಡೆದಿದ್ದಾರೆ.
ಲಾಲಾಜಿ ಮೆಂಡನ್ 75,475 ಮತ ಪಡೆದರೆ ಸೊರಕೆಯವರು 63,739 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಮನ್ಸೂರು ಇಬ್ರಾಹಿಂ 1391, ಮಹಿಳಾ ಜನಶಕ್ತಿ ಕಾಂಗ್ರೆಸ್‌ನ ಸ್ಥಾಪಕಿ, ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ 1627 ಹಾಗೂ ಎಂಇಪಿ ಪಕ್ಷ ಅಬ್ದುಲ್ ರಹಿಮಾನ್ ಕೇವಲ 713 ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದಾರೆ. ಕಾಪು ಕ್ಷೇತ್ರದಲ್ಲಿ 837 ನೋಟಾ ಚಲಾವಣೆಯಾಗಿದ್ದು, ಅದರಲ್ಲಿ ಎರಡು ಅಂಚೆ ಮತಗಳೂ ಸೇರಿವೆ. ಚಲಾವಣೆಯಾದ ಅಂಚೆ ಮತಗಳಲ್ಲೂ ಲಾಲಾಜಿ ಮೆಂಡನ್ ಮುನ್ನಡೆ ಗಳಿಸಿದ್ದಾರೆ. ಲಾಲಾಜಿಯವರಿಗೆ 420, ಸೊರಕೆಯವರಿಗೆ 237, ಮನ್ಸೂರ್ ಅವರಿಗೆ 2 ಹಾಗೂ ಅನುಪಮಾಗೆ 7 ಅಂಚೆ ಮತಗಳು ಲಭಿಸಿವೆ.
ಅಭಿವೃದ್ಧಿ ಹಾಗೂ ಅತೀ ಹೆಚ್ಚಿನ ಮುಖ್ಯಂತ್ರಿ ಪರಿಹಾರ ದೊರಕಿಸಿಕೊಡುವ ಮೂಲಕ ಕಳೆದ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯ ನಡುವೆ ಗೆಲ್ಲುವ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಲಾಲಾಜಿಯವರು ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಸೊರಕೆ ಎದುರು ಕೇವಲ 1,800 ಮತಗಳ ಅಂತರದಲ್ಲಿ ಸೋಲುಂಡಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲೂ 25ಸಾವಿರ ಅಂತರರದ ಮುನ್ನಡೆಯ ಮತದಾನ ಬಿಜೆಪಿ ಪಡೆದಿತ್ತು. ಈ ಆಧಾರದಲ್ಲಿ ಈ ಭಾರಿ ಬಿಜೆಪಿಯಲ್ಲಿ ಲಾಲಾಜಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲವು ಅವರದೇ ಎಂದು ಕಾರ್ಯಕರ್ತರು ಬಿಂಬಿಸುತಿದ್ದರು.
ಇನ್ನೊಂದೆಡೆ ಸುರೇಶ್ ಶೆಟ್ಟಿ ಗುರ್ಮೆ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕು ಎನ್ನುವ ಬೇಡಿಕೆಯೂ ಕಾರ್ಯಕರ್ತರಲ್ಲಿ ಇತ್ತು. ಈ ಬಾರಿ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಮೂರು ಜನ ಆಕಾಂಕ್ಷಿಗಳಿದ್ದು, ಅಂತಿಮವಾಗಿ ಚುನಾವಣೆಗೆ 15 ದಿನಗಳಿಗೆ ಮೊದಲು ಲಾಲಾಜಿ ಹೆಸರು ಘೋಷಣೆಯಾಗಿತ್ತು.
ಬಿಜೆಪಿ ಅಭ್ಯರ್ಥಿ ಘೋಷಣೆ ತಡವಾದರೂ ಕಾರ್ಯಕರ್ತರು ಮಾತ್ರ ಅಭ್ಯರ್ಥಿ ಘೋಷಣೆ ಮೊದಲೇ ಪ್ರಚಾರ ನಡೆಸಿದ್ದರು. ಇನ್ನೊಂದೆಡೆ ಅಭ್ಯರ್ಥಿ ಘೋಷಣೆ ಬಳಿಕ ಬಿಜೆಪಿಯಲ್ಲಿ ಟಿಕೆಟ್ ಅಕಾಂಕ್ಷಿಗಳ ಅಸಮಾದಾನವು ಭುಗಿಲೆದ್ದಿತ್ತು. ಆದರೆ ಮೋದಿಯವರು ಜಿಲ್ಲೆಗೆ ಆಗಮಿಸಿದ ಬಳಿಕ ಮತದಾನದ ಕೊನೆಯ ನಾಲ್ಕು ದಿನಗಳಲ್ಲಿನ ಪಕ್ಷದ ಪ್ರಚಾರದ ಬದಲಾದ ಚಿತ್ರಣದಿಂದ ಲಾಲಾಜಿಗೆ ಲಾಭವಾಗಿದೆ.
ಸಂಭ್ರಮ ಆಚರಣೆ: ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಅವರ ಗೆಲುವು ಕಾರ್ಯಕರ್ತರು ಕಾಪು ಕ್ಷೇತ್ರದಾದ್ಯಂತ ಸಂಭ್ರಮ ಆಚರಿಸಿದರು.
ಮತೆ ಎಣಿಕೆಯಲ್ಲಿ ನಾಲ್ಕನೇ ಸುತ್ತಿನಲ್ಲಿ ಮುನ್ನಡೆ ಸಾಧಿಸುತಿದ್ದಂತೆಯೇ ಕಾಪು ಕ್ಷೇತ್ರದ ಪಡುಬಿದ್ರಿ, ಹೆಜಮಾಡಿ, ಎರ್ಮಾಳು, ಉಚ್ಚಿಲ, ಕಾಪು, ಕಟಪಾಡಿ ಸಹಿತ ಎಲ್ಲೆಡೆ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮ ಆಚರಿಸಿದರು. ಆ ಬಳಿಕ ದ್ವಿಚಕ್ರ ವಾಹನಗಳಲ್ಲಿ ಕಾಪು ತಲುಪಿದರು.
ಬೆಳಗ್ಗೆಯಿಂದ ಸಂಜೆಯವರೆಗೂ ಲಾಲಾಜಿ ಮೆಂಡನ್‌ಗಾಗಿ ಸಂಜೆಯವರೆಗೆ ಕಾದು ಕುಳಿತರು. ಸಂಜೆಯ ವೇಳೆಗೆ ಜಿಲ್ಲಾಧಿಕಾರಿ ಅವರಿಂದ ಪ್ರಮಾಣ ಪತ್ರ ಪಡೆದುಕೊಂಡು ಉಡುಪಿಯಿಂದ ತೆರೆದ ವಾಹನದಲ್ಲಿ ಕಾಪುವಿಗೆ ಆಗಮಿಸಿದ ಲಾಲಾಜಿ ಅವರು, ಅವರನ್ನು ಸ್ವಾಗತಿಸಿದರು. ಆ ಬಳಿಕ ತೆರೆದ ವಾಹನದಲ್ಲಿ ಹೆಜಮಾಡಿಯವರೆಗೆ ಆಗಮಿಸಿದರು. ಕಾರ್ಯಕರ್ತರು, ಅಭಿಮಾನಿಗಳು ಅವರನ್ನು ಹೂ ಹಾರ ಹಾಕಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಾಲಾಜಿ ಮೆಂಡನ್, ಈ ಗೆಲುವು ಕಾರ್ಯಕರ್ತರ ಗೆಲುವಾಗಿದೆ. ಕಾರ್ಯಕರ್ತರ ಶ್ರಮಕ್ಕೆ ಸಿಕ್ಕಿದ ಪ್ರತಿಫಲವಾಗಿ ನಾನು ಕಾಪು ಕ್ಷೇತ್ರದಲ್ಲಿ ಮತ್ತೊಮ್ಮೆ ಶಾಸಕನಾಗಿ ಆಯ್ಕೆಯಾಗಿರುವುದು ಖುಷಿಕೊಟ್ಟಿದೆ. ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ಕಾಪು ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಈ ಭಾರಿ ಧರ್ಮ ಮತ್ತು ಅಧರ್ಮದ ನಡುವೆ ನಡೆದ ಚುನಾವಣೆ ಅಗಿತ್ತು. ಇಲ್ಲಿ ಅಧರ್ಮದ ಬೇರು ಕತ್ತರಿಸಿದ ಯುದ್ಧವಾಗಿದೆ. ಕಾಪು ಅಭೂತ ಪೂರ್ವ ವಿಜಯಕ್ಕೆ ಸಾಕ್ಷಿಯಾಗಿದೆ ಎಂದರು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕ್ಷೇತ್ರ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗಂಗಾಧರ ಸುವರ್ಣ, ಶಿಲ್ಪ ಜಿ.ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.







