ಕೊಡಗಿನಲ್ಲಿ ಮತ್ತೆ ಅರಳಿದ ತಾವರೆ: ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್‍ಗೆ ಭರ್ಜರಿ ಗೆಲುವು
ಕಾಂಗ್ರೆಸ್, ಜೆಡಿಎಸ್ ಕನಸು ಭಗ್ನ

ಮಡಿಕೇರಿ,ಮೇ.15: ಎರಡೂ ಕ್ಷೇತ್ರಗಳಲ್ಲಿ ಗೆಲುವಿನ ನಗು ಬೀರುವ ಮೂಲಕ ಬಿಜೆಪಿಯ ಭದ್ರಕೋಟೆ ಕೊಡಗಿನಲ್ಲಿ ಪಕ್ಷ ಸುಭದ್ರವಾಗಿದೆ ಎನ್ನುವುದನ್ನು ಕಾರ್ಯಕರ್ತರು ಮತ್ತೆ ಸಾಬೀತು ಪಡಿಸಿದ್ದಾರೆ.
ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಜಿಲ್ಲೆ ಕಮಲದ ಭದ್ರಕೊಟೆ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದೆ. ಬಿಜೆಪಿ ಭದ್ರಕೋಟೆ ಭೇದಿಸುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಯತ್ನಗಳು ಸಂಪೂರ್ಣವಾಗಿ ವಿಫಲವಾಗಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಎಂ.ಪಿ.ಅಪ್ಪಚ್ಚು ರಂಜನ್ ಅವರು ಗೆಲುವು ಸಾಧಿಸುವ ಮೂಲಕ ಸತತ 5ನೇ ಬಾರಿ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಜಿ.ಬೋಪಯ್ಯ ಅವರು ಗೆಲುವು ಸಾಧಿಸುವ ಮೂಲಕ 4ನೇ ಬಾರಿ ವಿಧಾನಸಭೆಯ ಮೆಟ್ಟಿಲೇರಿದ ಸಾಧನೆ ಮಾಡಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆಯ ಬಳಿಕ ಮಡಿಕೇರಿ ಮತ್ತು ವೀರಾಜಪೇಟೆ ಕ್ಷೇತ್ರಗಳಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿರುವುದು ಗಮನಾರ್ಹ.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಎಂ.ಪಿ. ಅಪ್ಪಚ್ಚು ರಂಜನ್ 70,631 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದು, ಎದುರಾಳಿ ಬಿ.ಎ. ಜೀವಿಜಯ 54,616 ಮತಗಳನ್ನಷ್ಟೆ ಪಡೆಯಲು ಶಕ್ತರಾಗುವ ಮೂಲಕ 16,015 ಮತಗಳ ಅಂತರದ ಸೋಲನ್ನು ಕಾಣುವಂತಾಯಿತು. ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ 38,219 ಮತಗಳನ್ನು ಪಡೆಯುವ ಮೂಲಕ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಕೊಂಡರು. ವೀರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ 11,224 ಮತಗಳನ್ನು ಪಡೆಯುವ ಮೂಲಕ ತೃತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
‘ನೋಟಾ’ ದಾಖಲೆ
ಕೊಡಗಿನ ಎರಡು ಕ್ಷೇತ್ರಗಳಲ್ಲಿಯೂ ಕಂಡು ಬಂದ ನೋಟಾ ವೋಟುಗಳು ಗಾಬರಿ ಮೂಡಿಸಿದ್ದು, ಮಡಿಕೇರಿ ಕ್ಷೇತ್ರದಲ್ಲಿ ನೋಟಾಕ್ಕೆ 1615 ಮತಗಳು ಬಿದ್ದಿದ್ದರೆ, ವೀರಾಜಪೇಟೆ ಕ್ಷೇತ್ರದಲ್ಲಿ ಈ ಸಂಖ್ಯೆ 1733.
ಬಿಗಿ ಭದ್ರತೆಯಲ್ಲಿ ಮತ ಎಣಿಕೆ
ನಗರದ ಸಂತ ಜೋಸೆಫರ ಶಾಲೆಯ ಮತ ಎಣಿಕಾ ಕೇಂದ್ರದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಾದ ಶ್ರೀವಿದ್ಯಾ ಉಸ್ತುವಾರಿಯಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕಾ ಕಾರ್ಯ ನಡೆದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟಗೊಂಡಿತು.
ಜಿಲ್ಲಾ ಪೊಲೀಸ್, ಎಸ್‍ಎಸ್‍ಬಿ ಮತ್ತು ಸಿಆರ್‍ಪಿಎಫ್ ಪೊಲೀಸರ ಬಿಗಿ ಭದ್ರತೆಯಲ್ಲಿ ಮತ ಎಣಿಕಾ ಕಾರ್ಯನಡೆಯಿತು, ಈ ಸಂದರ್ಭ ಅಭ್ಯರ್ಥಿಗಳಾದ ಅಪ್ಪಚ್ಚು ರಂಜನ್, ಅರುಣಾ ಮಾಚಯ್ಯ, ಸಂಕೇತ್ ಪೂವಯ್ಯ ಸೇರಿದಂತೆ ಹಲವು ಅಭ್ಯರ್ಥಿಗಳು ಇದ್ದರಾದರು, ಜೆಡಿಎಸ್‍ನ ಬಿ.ಎ.ಜೀವಿಜಯ ಹಾಗೂ ಕಾಂಗ್ರೆಸ್‍ನ ಕೆ.ಪಿ.ಚಂದ್ರಕಲಾ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಮುಗಿಲು ಮುಟ್ಟಿದ ಸಂಭ್ರಮ
ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಬಳಿ ಇದ್ದ ಸಾವಿರಾರು ಕಾರ್ಯಕರ್ತರು ಜಯಘೋಷಗಳನ್ನು ಮೊಳಗಿಸಿ ಕುಣಿದು ಕುಪ್ಪಳಿಸಿದರು. ಪ್ರಧಾನಿ ನರೇಂದ್ರಮೋದಿ ಅವರ ಪರ ಘೊಷಣೆಗಳು ಮುಗಿಲು ಮುಟ್ಟಿದವು. ಗೆಲುವು ಸಾಧಿಸಿದ ಅಭ್ಯರ್ಥಿಗಳಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಅವರನ್ನು ತೆರೆದ ವಾಹನಗಳಲ್ಲಿ ಮೆರವಣಿಗೆ ಮಾಡಿದ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಸಿದರು.







