ಶಂಕಿತ ಉಗ್ರರಿಂದ ದಾಳಿ : ಓರ್ವ ಪೊಲೀಸ್ ಹುತಾತ್ಮ
ಹೊಸದಿಲ್ಲಿ, ಮೇ 15: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಶಂಕಿತ ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ಪೊಲೀಸ್ ಹುತಾತ್ಮರಾಗಿದ್ದಾರೆ ಹಾಗೂ ಇನ್ನೋರ್ವ ಪೊಲೀಸ್ ಗಾಯಗೊಂಡಿದ್ದಾರೆ. ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆಹರಾದಲ್ಲಿ ಪೊಲೀಸ್ ವಾಹನದ ಮೇಲೆ ಶಂಕಿತ ಉಗ್ರರು ನಡೆಸಿದ ದಾಳಿಯಲ್ಲಿ ವಿಶೇಷ ಪೊಲೀಸ್ ಅಧಿಕಾರಿ ಬಿಲಾಲ್ ಅಹ್ಮದ್ ಮೃತಪಟ್ಟಿದ್ದಾರೆ. ಇನ್ನೋರ್ವ ಗಾಯಗೊಂಡ ಪೊಲೀಸ್ ಕಾನ್‌ಸ್ಟೆಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅನಂತ್‌ನಾಗ್ ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿಗಳು ತಿಳಿಸಿದ್ದಾರೆ.
ಶಂಕಿತ ಉಗ್ರರು ದಾಳಿಗೆ ಪ್ರತಿಯಾಗಿ ಪೊಲೀಸರು ದಾಳಿ ನಡೆಸಿದರು. ಕೂಡಲೇ ಉಗ್ರರನ್ನು ಪತ್ತೆ ಹಚ್ಚಲು ಈ ಪ್ರದೇಶವನ್ನು ಸುತ್ತುವರಿಯಲಾಯಿತು. ಈ ದಾಳಿಯಲ್ಲಿ ಎಷ್ಟು ಮಂದಿ ಶಂಕಿತ ಉಗ್ರರು ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿಲ್ಲ ಎಂದು ಕಾಶ್ಮೀರ ಪೊಲೀಸ್‌ನ ಟ್ವಿಟ್ಟರ್ ಹ್ಯಾಂಡಲ್ ಹೇಳಿದೆ. ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಬಿಲಾಲ್ ಅಹ್ಮದ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ಬಿಲಾಲ್ ಅಹ್ಮದ್ ಅವರ ಕುಟುಂಬದೊಂದಿಗೆ ತಾವಿದ್ದೇವೆ ಎಂದು ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.







