ಸಹೋದ್ಯೋಗಿಗೆ ಲೈಂಗಿಕ ಕಿರುಕುಳ: ಟೆಕ್ಕಿ ವಿರುದ್ಧ ದೂರು

ಬೆಂಗಳೂರು, ಮೇ 16: ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಖ್ಯಾತ ಐಟಿ ಕಂಪೆನಿಯೊಂದರ ಅಧಿಕಾರಿ, 2016ರಲ್ಲಿ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ವಿಜಯ್ ಕುಮಾರ್ (32) ಎಂಬಾತನ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 354ಎ ಅಡಿಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಲಾಗಿದೆ.
"ಮೇ 11ರಂದು ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ವಿಚಾರಣೆಗೆ ಗುರಿಪಡಿಸಲಾಗಿದೆ. ವಿಚಾರಣೆ ಪೂರ್ಣಗೊಂಡ ಬಳಿಕ ನಿಜಾಂಶ ತಿಳಿಯಲಿದೆ. ಬಹುಶಃ ಇದು ಇಬ್ಬರ ನಡುವಿನ ವೈಯಕ್ತಿಕ ಮತ್ತು ಹಣಕಾಸು ಪ್ರಕರಣ" ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಕುಮಾರ್, ಏಳು ಲಕ್ಷ ರೂಪಾಯಿಯನ್ನು ಇ-ವಾಣಿಜ್ಯ ಕಂಪನಿಯೊಂದರಲ್ಲಿ ಹೂಡಿಕೆ ಮಾಡುವಂತೆ ಸಲಹೆ ಮಾಡಿದ್ದ ಎನ್ನಲಾಗಿದೆ. ಈ ಹಣವನ್ನು ವಾಪಸು ಕೇಳಿದಾಗ ಅನುಚಿತವಾಗಿ ವರ್ತಿಸಲು ಆರಂಭಿಸಿದ. ಕಚೇರಿ ಹಾಗೂ ಮನೆಯಲ್ಲಿ ಅಸಭ್ಯವಾಗಿ ತನ್ನ ಜತೆ ವರ್ತಿಸಲಾರಂಭಿಸಿದ ಎಂದು ಮಹಿಳೆ ದೂರಿದ್ದಾಳೆ.





