ಇವಿಎಂ ಗೊಂದಲಕ್ಕೆ ತೆರೆ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಫಲಿತಾಂಶ ಪ್ರಕಟ

ಧಾರವಾಡ, ಮೇ 16: ಮತ ಎಣಿಕೆಯ ವೇಳೆ ಇವಿಎಂ ಮತ್ತು ವಿವಿಪ್ಯಾಟ್‌ನಲ್ಲಿ ಕಾಣಿಸಿಕೊಂಡ ಗೊಂದಲದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಫಲಿತಾಂಶವನ್ನು ಮಂಗಳವಾರ ಮಧ್ಯರಾತ್ರಿಯೇ ಪ್ರಕಟಿಸಲಾಗಿದೆ.
ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ವಿಜಯಿ ಅಭ್ಯರ್ಥಿಯೆಂದು ಚುನಾವಣಾಧಿಕಾರಿಗಳು ಅಧಿಕೃತವಾಗಿ ಘೋಷಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 152(ಎ)ರ ಇವಿಎಂನಲ್ಲಿ ಚಲಾವಣೆಯಾದ ಮತಗಳಿಗಿಂತ 207 ಹೆಚ್ಚುವರಿ ಮತಗಳನ್ನು ವಿವಿಪ್ಯಾಟ್ ತೋರಿಸಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಮಹೇಶ್ ನಾಲವಾಡ ಚುನಾವಣಾ ಫಲಿತಾಂಶ ತಡೆಹಿಡಿಯುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಅದರಂತೆ ಚುನಾವಣಾ ಫಲಿತಾಂಶ ತಡೆ ಹಿಡಿಯುವಂತೆ ಚುನಾವಣಾಧಿಕಾರಿ ಮೌಖಿಕ ಸೂಚನೆ ನೀಡಿದ್ದರು.
ಈ ನಡುವೆ ಕೊನೆಯ 19ನೇ ಸುತ್ತಿನ ಮತ ಎಣಿಕೆಯ ಬಳಿಕ 75,591 ಮತಗಳನ್ನು ಗಳಿಸಿದ್ದ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ವಿಜಯಿ ಅಭ್ಯರ್ಥಿ ಎಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ.
ಅವರ ಪ್ರತಿಸ್ಪರ್ಧಿ ಡಾ.ಮಹೇಶ್ ನಾಲವಾಡ 54,321 ಮತಗಳನ್ನು ಗಳಿಸಲಷ್ಟೇ ಶಕ್ತವಾಗಿದ್ದಾರೆ. ಜಗದೀಶ್ ಶೆಟ್ಟರ್ 21,270 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ನಿನ್ನೆ ಮಧ್ಯರಾತ್ರಿ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಈ ಕ್ಷೇತ್ರದ ಫಲಿತಾಂಶವನ್ನು ಚುನಾವಣಾಧಿಕಾರಿ ಪ್ರಕಟಿಸಿದ್ದಾರೆ.







