ರಾಜ್ಯದಲ್ಲಿ ಮತ್ತೊಮ್ಮೆ ರೆಸಾರ್ಟ್ ರಾಜಕೀಯ ಆರಂಭ
ಬೆಂಗಳೂರು, ಮೇ 16: ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ರೆಸಾರ್ಟ್ ರಾಜಕೀಯ ಆರಂಭವಾಗಿದೆ. ಬಿಜೆಪಿಯ ಆಪರೇಷನ್ ಕಮಲದ ಭೀತಿಗೆ ಒಳಗಾಗಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಖಾಸಗಿ ರೆಸಾರ್ಟ್‌ಗಳ ಮೊರೆ ಹೋಗಿದ್ದಾರೆ.
ಕಾಂಗ್ರೆಸ್ ಪಕ್ಷದ 10ಕ್ಕೂ ಹೆಚ್ಚು ಲಿಂಗಾಯತ ಶಾಸಕರನ್ನು ತಮ್ಮತ್ತ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿರುವ ಮಾಹಿತಿಯನ್ನು ಪಡೆದಿರುವ ಕಾಂಗ್ರೆಸ್ ಮುಖಂಡರು, ರೆಸಾರ್ಟ್ ರಾಜಕೀಯಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸುವ ಜವಾಬ್ದಾರಿಯನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್‌ಗೆ ವಹಿಸಲಾಗಿದೆ.
ಶತಾಯಗತಾಯ ಸರಕಾರವನ್ನು ರಚನೆ ಮಾಡಲೇಬೇಕು ಎಂದು ಹಠಕ್ಕೆ ಬಿದ್ದಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ವಿವಿಧ ಆಮಿಷಗಳನ್ನು ಒಡ್ಡಿ ತನ್ನತ್ತ ಸೆಳೆಯುವ ಸಾಧ್ಯತೆಗಳಿವೆ. ಆದುದರಿಂದ, ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರ ರಕ್ಷಣೆಯ ಪ್ರಕ್ರಿಯೆ ನಡೆದಿದೆ.
ರೆಸಾರ್ಟ್‌ನಲ್ಲಿ ಶಾಸಕರಿಗೆ ಬಿಗಿ ಭದ್ರತೆ ಒದಗಿವುದು ಹಾಗೂ ಯಾವುದೆ ಕಾರಣಕ್ಕೂ ಬಿಜೆಪಿ ಸಂಪರ್ಕಕ್ಕೆ ಸಿಗದಂತೆ ಅವರ ಸುತ್ತಲೂ ಭದ್ರಕೋಟೆ ನಿರ್ಮಿಸಲಾಗುತ್ತಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಬೆಳಗ್ಗೆ 8.30ಕ್ಕೆ ನಿಗದಿ ಮಾಡಿದ್ದರೂ, ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೇವಲ 55 ಮಂದಿ ಮಾತ್ರ ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಆನಂತರ, ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಎಂ.ಬಿ.ಪಾಟೀಲ್ ಹಾಗೂ ಡಿ.ಕೆ.ಶಿವಕುಮಾರ್ ಸ್ವತಃ ಎಲ್ಲ ಶಾಸಕರನ್ನು ಸಂಪರ್ಕಿಸಿ ಬಿಜೆಪಿಯ ಆಮಿಷಗಳಿಗೆ ಒಳಗಾಗದಂತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.







