ಕಾಂಗ್ರೆಸ್ ರೆಸಾರ್ಟ್ ರಾಜಕೀಯಕ್ಕೆ ಬಿಜೆಪಿ ಪ್ರತಿತಂತ್ರ

ಬೆಂಗಳೂರು, ಮೇ 16: ಅತಂತ್ರ ವಿಧಾನಸಭೆ ರಚನೆಯಾಗಿರುವ ಹಿನ್ನೆಲೆಯಲ್ಲಿ ಆಪರೇಷನ್ ಕಮಲದ ಭೀತಿಯಿಂದ ಕಾಂಗ್ರೆಸ್ ರೆಸಾರ್ಟ್ ರಾಜಕೀಯದ ಮೊರೆ ಹೋಗಿರುವುದರಿಂದ, ಅದಕ್ಕೆ ಪ್ರತ್ಯುತ್ತರ ನೀಡಲು ಬಿಜೆಪಿ ಪ್ರತಿತಂತ್ರ ರೂಪಿಸುತ್ತಿದೆ.
ಜೆಡಿಎಸ್ ಪಕ್ಷಕ್ಕೆ ಸರಕಾರ ರಚನೆಗೆ ಸಂಪೂರ್ಣ ಬೆಂಬಲ ಘೋಷಿಸಿರುವ ರಾಜ್ಯ ನಾಯಕರ ನಡೆಯಿಂದ ಅಸಮಾಧಾನ ಹೊಂದಿರುವ ಹಾಗೂ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿರುವ ಕಾಂಗ್ರೆಸ್‌ನ ಸುಮಾರು 10 ಶಾಸಕರನ್ನು ಸೆಳೆಯಲು ಬಿಜೆಪಿ ನಡೆಸಿದ ಪ್ರಯತ್ನಗಳು ಕೈಗೂಡಲಿಲ್ಲ ಎನ್ನಲಾಗಿದೆ.
ಆದುದರಿಂದ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಇತರ ಶಾಸಕರ ಪಟ್ಟಿ ತಯಾರಿಸಿ, ಅವರನ್ನು ತಮ್ಮತ್ತ ಸೆಳೆಯಲು ಪ್ರಯತ್ನ ಮಾಡುವಂತೆ ಕೆಲ ಬಿಜೆಪಿ ನಾಯಕರು ಕಸರತ್ತು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈಶ್ವರಪ್ಪ ವಾಗ್ದಾಳಿ : ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಪರಸ್ಪರ ಎಂತಹ ಆರೋಪ, ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದರು. ಎಂತಹ ಭಾಷೆಯನ್ನು ಬಳಸಿದ್ದರು ಎಂಬುದು ಜನರಿಗೆ ಗೊತ್ತಿದೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರಾಜಕೀಯ ಚದುರಂಗದಾಟವಾಗಿದ್ದು, ಕಾಂಗ್ರೆಸ್ ಪಕ್ಷದ ನಾಯಕರಿಂದ ಕುತಂತ್ರ ರಾಜಕಾರಣ ನಡೆಯುತ್ತಿದೆ. ಬೇರೆ ರಾಜ್ಯಗಳಿಗೂ ಇಲ್ಲಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದರು.
ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿಯನ್ನು ಸಂಪರ್ಕಿಸುತ್ತಿದ್ದಾರೆ. ಆ ಶಾಸಕರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಬೇಕಿಲ್ಲ. ಅವರಾಗಿಯೇ, ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಯಾರು ಎಷ್ಟು ಮಂದಿ ಎಂಬುದನ್ನು ಈಗಲೇ ಹೇಳುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.







