ನಮಗೂ ರಾಜಕೀಯ ಮಾಡಲು ಗೊತ್ತು: ಡಿ.ಕೆ.ಶಿವಕುಮಾರ್

ಬೆಂಗಳೂರು, ಮೇ 16: ಬಿಜೆಪಿ ನಾಯಕರು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಖರೀದಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ರಾಜಕಾರಣಿಗಳು, ರಾಜಕೀಯ ಮಾಡಲು ನಮಗೂ ಗೊತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಯಾವ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟಕ್ಕೆ ಬಹುಮತವಿದ್ದು, ನಾವೇ ಸರಕಾರ ರಚನೆ ಮಾಡುತ್ತೇವೆ. ನಮ್ಮ ಶಾಸಕರ ಮೇಲೆ ನಿರಂತರವಾಗಿ ಒತ್ತಡ ಹೇರಲಾಗುತ್ತಿದೆ ಎಂದು ದೂರಿದರು.
ಬಯ್ಯಪುರ ಒಬ್ಬರೇ ಅಲ್ಲಾ, ಎಲ್ಲ ಕಾಂಗ್ರೆಸ್ ಶಾಸಕರಿಗೂ ಬಿಜೆಪಿಯವರು ಕರೆ ಮಾಡುತ್ತಿದ್ದಾರೆ. ಆದರೆ, ಅವರ ಕರೆದ ತಕ್ಷಣ ಹೋಗೋಕೆ ನಮ್ಮ ಶಾಸಕರೇನು ದಡ್ಡರಲ್ಲ. ಮತ ನೀಡಿದ ಕ್ಷೇತ್ರದ ಜನ ಅಷ್ಟು ಸುಲಭವಾಗಿ ಅವರನ್ನು ಬೇರೆ ಪಕ್ಷಕ್ಕೆ ಹೋಗಲು ಬಿಡುವುದಿಲ್ಲ ಎಂದು ಅವರು ಹೇಳಿದರು.
ಬಿಜೆಪಿಯ ಮುಖಂಡರು ನಮ್ಮ ಪಕ್ಷದ ಯಾವ ಯಾವ ನಾಯಕರಿಗೆ ಕರೆ ಮಾಡಿದ್ದಾರೆ ಎಂಬ ಪಟ್ಟಿಯೂ ನಮ್ಮ ಬಳಿ ಲಭ್ಯವಿದೆ ಎಂದು ಶಿವಕುಮಾರ್ ತಿಳಿಸಿದರು.





