ಮೈಸೂರು ನರಸಿಂಹರಾಜ ಕ್ಷೇತ್ರದಲ್ಲಿ ಮತಯಂತ್ರಗಳನ್ನು ಹ್ಯಾಕ್ ಮಾಡಿರುವ ಆರೋಪ
ನಾಲ್ವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಜೆಡಿಎಸ್ ಅಭ್ಯರ್ಥಿ, ಕಾರ್ಯಕರ್ತರು

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಜೆಡಿಎಸ್ ಮತ್ತು ಎಸ್ ಡಿ ಪಿ ಐ ಅಭ್ಯರ್ಥಿಗಳು
ಮೈಸೂರು, ಮೇ 17: ಮತಯಂತ್ರಗಳನ್ನು ಹ್ಯಾಕ್ ಮಾಡಿರುವ ಆರೋಪದಲ್ಲಿ ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮತ್ತು ಕಾರ್ಯಕರ್ತರು ನಾಲ್ವರನ್ನು ಹಿಡಿದು ನರಸಿಂಹರಾಜ ಮೊಹಲ್ಲಾ ಪೊಲೀಸ್ ಠಾಣೆಗೆ ಒಪ್ಪಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಮೊದಲು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ವೆಂಕಟೇಶ್ ಹಾಗೂ ಮೈಸೂರಿನ ಪ್ರದೀಪ್ ಎಂಬವರು ನರಸಿಂಹರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಅಝೀಝ್ ಮತ್ತು ಬಿಜೆಪಿ ಅಭ್ಯರ್ಥಿ ಸಂದೇಶ್ ಸ್ವಾಮೀ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ 5 ಕೋಟಿ ರೂ. ನೀಡಿದಲ್ಲಿ ನಿಮ್ಮನ್ನು 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸುವುದಾಗಿ ಹೇಳಿದ್ದರು ಎನ್ನಲಾಗಿದೆ. ವೆಂಕಟೇಶ್ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಫಲಿತಾಂಶದ ಬಳಿಕ ನನಗೆ ನಿರೀಕ್ಷೆಗಿಂತ ಕಡಿಮೆ ಮತಗಳು ಲಭಿಸಿದ್ದು ಹಾಗೂ ಅದರಲ್ಲೂ ಜೆಡಿಎಸ್ ಪ್ರಾಬಲ್ಯ ಇರುವ ಹಲವು ಪ್ರದೇಶಗಳಲ್ಲಿ ಅತೀ ಕಡಿಮೆ ಮತ ಲಭಿಸಿರುವುದರಿಂದ ಮತಯಂತ್ರಗಳ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆ ಬಳಿಕ ಹಣದ ಬೇಡಿಕೆಯಿಟ್ಟಿದ್ದ ಮೈಸೂರಿನ ಪ್ರದೀಪ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರೂ ಆತ ಸಂಪರ್ಕಕ್ಕೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ಮನೆಗೆ ಭೇಟಿ ನೀಡಿದಾಗ ಆತ ಮನೆ ಖಾಲಿ ಮಾಡಿ ಪರಾರಿಯಾಗಿರುವುದು ತಿಳಿದು ಬಂದಿದೆ ಎಂದು ಅಬ್ದುಲ್ ಅಝೀಝ್ ಆರೋಪಿಸಿದ್ದಾರೆ.
ಪ್ರದೀಪ್ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆತನ ಜೊತೆ ಒಡನಾಟ ಹೊಂದಿದ್ದ ನಾಲ್ವರನ್ನು ಹಿಡಿದು ಅಬ್ದುಲ್ ಅಝೀಝ್ ಹಾಗೂ ಜೆಡಿಎಸ್ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಅಬ್ದುಲ್ ಅಝೀಝ್ ನೀಡಿರುವ ದೂರುನಂತೆ ನರಸಿಂಹರಾಜ ಮೊಹಲ್ಲಾ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ವಿವಿಧ ಪಕ್ಷಗಳ ಸಾವಿರಾರು ಕಾರ್ಯಕರ್ತರು ಠಾಣೆಯ ಎದುರು ಜಮಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೈಕೋರ್ಟ್ಗೆ ದೂರು: ಎಸ್ಡಿಪಿಐ ಉಸ್ತುವಾರಿ
ಚುನಾವಣೆಗೆ ಮೊದಲು ಇಬ್ಬರು ವ್ಯಕ್ತಿಗಳು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳಲ್ಲಿ ಹಣ ನೀಡಿದರೆ ನಿಮ್ಮನ್ನು 20 ಸಾವಿರ ಮತಗಳ ಅಂತರದಿಂದ ಗೆಲ್ಲುವಂತೆ ಮಾಡಲಾಗುವುದು ಎಂದು ಹೇಳಿರುವುದಾಗಿಯೂ, ಆ ಇಬ್ಬರು ವ್ಯಕ್ತಿಗಳ ಸಂಪರ್ಕದಲ್ಲಿದ್ದ ಕೆಲವರನ್ನು ಜೆಡಿಎಸ್ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಮತಯಂತ್ರಗಳ ಬಗ್ಗೆ ನಮಗೂ ಸಂಶಯವಿದೆ. ನರಸಿಂಹರಾಜ ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಎಸ್ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್ ಅವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಆದರೆ ಆ ಪ್ರದೇಶಗಳಲ್ಲಿ ಅವರಿಗೆ ಅತೀ ಕಡಿಮೆ ಮತಗಳು ಲಭಿಸಿದೆ. ಇದು ನಮ್ಮಲ್ಲಿ ಮತಯಂತ್ರಗಳ ಬಗ್ಗೆ ಸಂಶಯ ಉಂಟುಮಾಡಿದೆ. ಈ ಬಗ್ಗೆ ನಾವು ಹೈಕೋರ್ಟ್ಗೆ ದೂರು ಸಲ್ಲಿಸಲಿದ್ದೇವೆ ಎಂದು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಎಸ್ಡಿಪಿಐ ಪಕ್ಷದ ಉಸ್ತುವಾರಿ ಲತೀಫ್ ಪುತ್ತೂರು ತಿಳಿಸಿದ್ದಾರೆ.
ತನಿಖೆಯಿಂದ ಸತ್ಯ ತಿಳಿದು ಬರಬೇಕಿದೆ: ಅಬ್ದುಲ್ ಮಜೀದ್
ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಅಝೀಝ್ ಬಳಿ ಇಬ್ಬರು ವ್ಯಕ್ತಿಗಳು ಬಂದು 5 ಕೋಟಿ ರೂ. ನೀಡಿದರೆ ನಿಮ್ಮನ್ನು 20 ಸಾವಿರ ಮತಗಳ ಅಂತರದಿಂದ ಗೆಲ್ಲುವಂತೆ ಮಾಡಲಾಗುವುದು. ಈಗ ಎರಡೂವರೆ ಕೋಟಿ ರೂ. ಮುಂಗಡವಾಗಿ ಕೊಡಿ. ಬಾಕಿ ಮತ್ತೆ ಕೊಡಿ ಎಂದು ಹೇಳಿದ್ದರು. ಆದರೆ ಅಬ್ದುಲ್ ಅಝೀಝ್ ಅದನ್ನು ಗಂಭೀರವಾಗಿ ಪರಿಗಣಿಸದೆ ಅವರನ್ನು ವಾಪಸ್ ಕಳುಹಿಸಿದ್ದರು. ಬಹುಷಃ ಈ ತಂಡ ತನ್ವೀರ್ ಸೇಠ್ ಅವರನ್ನು ಭೇಟಿ ಮಾಡಿರಬಹುದು ಎಂಬ ಅನುಮಾನಗಳಿವೆ. ಎಸ್ಡಿಪಿಐಗೆ ಸಿಗಬೇಕಾದ ಮತಗಳು ಸಿಕ್ಕಿಲ್ಲ. ಕೆಲವು ಕಡೆ ನಮಗೆ ಶೂನ್ಯ ಮತ ಲಭಿಸಿದೆ. ಅಬ್ದುಲ್ ಅಝೀಝ್ಗೆ ಕೂಡಾ ನಿರೀಕ್ಷಿಸಿದ ಮತ ಬಿದ್ದಿಲ್ಲ. ಇವೆಲ್ಲವೂ ಅನುಮಾನಗಳಿಗೆ ಎಡೆಮಾಡಿದೆ. ಕ್ಷೇತ್ರದ ಹಲವು ಕಡೆ ಮತಯಂತ್ರಗಳನ್ನು ಹ್ಯಾಕ್ ಮಾಡಿರುವ ಅನುಮಾನಗಳಿವೆ. ಹ್ಯಾಕ್ ಮಾಡಿದ್ದರೆ ಇದೊಂದು ದೇಶ ದ್ರೋಹ ಪ್ರಕರಣವಾಗಿದೆ. ಇದರ ಹಿಂದೆ ದೊಡ್ಡ ತಂಡ ಇದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ. ತನಿಖೆಯಿಂದ ಸತ್ಯ ಏನೆಂದು ತಿಳಿದು ಬರಬೇಕಿದೆ. ಸತ್ಯವನ್ನು ಜನತೆಯ ಮುಂದೆ ಇಡುವ ದೊಡ್ಡ ಜವಾಬ್ದಾರಿ ಚುನಾವಣಾ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಮೇಲಿದೆ.
ದೂರು ದಾಖಲು: ಪೊಲೀಸ್ ಆಯುಕ್ತ
ನರಸಿಂಹರಾಜ ಕ್ಷೇತ್ರದಲ್ಲಿ ಮತಯಂತ್ರಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ಇಬ್ಬರು ವ್ಯಕ್ತಿಗಳ ಮೇಲೆ ಅನುಮಾನ ವ್ಯಕ್ತಪಡಿಸಿ ಅಲ್ಲಿನ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಅಝೀಝ್ ನೀಡಿರುವ ದೂರನ್ನು ಸ್ವೀಕರಿಸಿದ್ದೇವೆ. ಅಲ್ಲದೆ ಓರ್ವ ವ್ಯಕ್ತಿಯನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆದರೆ ಮತಯಂತ್ರಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ. ನಾವೂ ಮತಯಂತ್ರಗಳನ್ನು ಪ್ರಯೋಗ ಮಾಡಿ ನೋಡಿದ್ದೇವೆ. ಹ್ಯಾಕ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹ್ಯಾಕ್ ಮಾಡಲಾಗುತ್ತಿದೆ ಎಂಬುದು ಮೂರ್ಖತನದ ಮಾತು. ತನಿಖೆಯಿಂದ ಹ್ಯಾಕ್ ಮಾಡಿರುವುದು ದೃಢಪಡದಿದ್ದಲ್ಲಿ ಆ ಬಗ್ಗೆ ಆರೋಪಿಸಿರುವವರ ವಿರುದ್ಧವೇ ಕ್ರಮ ಜರಗಿಸಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ುಬ್ರಮಣ್ಯೇಶ್ವರ ರಾವ್ ತಿಳಿಸಿದ್ದಾರೆ.







