ಕಾಂಗ್ರೆಸ್- ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದರೆ ಏನಾಗುತ್ತಿತ್ತು ?

ಬೆಂಗಳೂರು, ಮೇ 17: ರಾಜ್ಯ ವಿಧಾನಸಭಾ ಚುನಾವಣೆ ಮುಗಿದು ಅತಂತ್ರ ವಿಧಾನಸಭೆ ರಚನೆಯಾಗಿರುವ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಬಿರುಸಿನ ರಾಜಕೀಯ ಚಟುವಟಿಕೆಗಳು ಕರ್ನಾಟಕದಲ್ಲಿ ನಡೆಯುತ್ತಿವೆ. ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಸರ್ಕಾರ ರಚಿಸುವಂತೆ ರಾಜ್ಯಪಾಲರು ನೀಡಿರುವ ಆಹ್ವಾನ ವಿವಾದಕ್ಕೆ ಕಾರಣವಾಗಿದೆ. ಆದರೆ ಫಲಿತಾಂಶ ಬಳಿಕ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್, ಚುನಾವಣಾಪೂರ್ವದಲ್ಲೇ ಮೈತ್ರಿ ಮಾಡಿಕೊಂಡಿದ್ದರೆ ರಾಜ್ಯ ವಿಧಾನಸಭೆಯ ಫಲಿತಾಂಶ ಏನಾಗುತ್ತಿತ್ತು ಗೊತ್ತೇ?
ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದರೆ, ಮೈತ್ರಿಕೂಟ 151 ಸ್ಥಾನಗಳನ್ನು ಗೆಲ್ಲುತ್ತಿತ್ತು ಹಾಗೂ ಬಿಜೆಪಿ 69 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಿತ್ತು ಎಂಬ ಕುತೂಹಲಕರ ಅಂಶ, ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಇನ್ನೂ ಕುತೂಹಲದ ಅಂಶವೆಂದರೆ ಇದೇ ಪ್ರವೃತ್ತಿ ಮುಂದುವರಿದರೆ, ಮುಂದಿನ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಬಿಜೆಪಿಗೆ ಭಾರಿ ಹೊಡೆತ ನೀಡಲಿದೆ. ಪ್ರಸ್ತುತ ಅಂಕಿ ಅಂಶಗಳ ಪ್ರಕಾರ, ಈ ಮೈತ್ರಿಕೂಟ ಮುಂದುವರಿದರೆ ಬಿಜೆಪಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ, 7ಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಕಳೆದ ಬಾರಿ ಬಿಜೆಪಿ 17 ಸ್ಥಾನ ಗೆದ್ದಿತ್ತು. ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಲ್ಲಿ ಕಾಂಗ್ರೆಸ್ ಸ್ಥಾನಗಳ ಸಂಖ್ಯೆ 9 ರಿಂದ 17ಕ್ಕೆ ಏರಲಿದೆ. ನಾಲ್ಕು ಸ್ಥಾನಗಳು ಜೆಡಿಎಸ್ ಪಾಲಾಗಲಿವೆ.
ವಿರೋಧ ಪಕ್ಷಗಳು ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದರೆ, ಕಾಂಗ್ರೆಸ್ 78 ಸ್ಥಾನದ ಬದಲಾಗಿ 99 ಸ್ಥಾನಗಳನ್ನು ಬಗಲಿಗೆ ಹಾಕಿಕೊಳ್ಳುತ್ತಿತ್ತು ಹಾಗೂ ಜೆಡಿಎಸ್ 37ರ ಬದಲಾಗಿ 51 ಸ್ಥಾನಗಳಲ್ಲಿ ಜಯ ಗಳಿಸುತ್ತಿತ್ತು. ಆದರೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡರೂ, ಜೆಡಿಎಸ್ ಸ್ಥಾನಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇಲ್ಲ. ಅದು ಹಾಲಿ ಇರುವ ಹಾಸನ, ಮಂಡ್ಯ, ತುಮಕೂರು ಮತ್ತು ಕೋಲಾರ ಕ್ಷೇತ್ರಕ್ಕೇ ಸೀಮಿತವಾಗುತ್ತದೆ. ಆದರೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಲ್ಲಿ ಕಾಂಗ್ರೆಸ್ ಪಕ್ಷ ಚಿಕ್ಕೋಡಿ, ರಾಯಚೂರು, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಮತ್ತು ಚಿತ್ರದುರ್ಗ ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಪಡೆಯಬಹುದಾಗಿದೆ. ಆದರೆ ಬಿಜೆಪಿಗೆ ಇಂಥ ಮೈತ್ರಿ ಏರ್ಪಟ್ಟರೂ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಧಾರವಾಡ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿನ ಬಿಜೆಪಿ ಪ್ರಾಬಲ್ಯಕ್ಕೆ ತಡೆಯಾಗದು.







