ಪ್ರಜಾಪ್ರಭುತ್ವದ ಸೋಲು : ಬಿಎಸ್ ವೈ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ರಾಹುಲ್ ಟ್ವೀಟ್

ಹೊಸದಿಲ್ಲಿ,ಮೇ.17 : ಇಂದು ಬೆಳಿಗ್ಗೆ ಬಿ ಎಸ್ ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಒಂದನ್ನು ಮಾಡಿ ಇದು ಪ್ರಜಾಪ್ರಭುತ್ವದ ಸೋಲು ಎಂದು ಬಣ್ಣಿಸಿದ್ದಾರೆ.
"ತನಗೆ ಅಗತ್ಯ ಸಂಖ್ಯೆಗಳಿರದ ಹೊರತಾಗಿಯೂ ಕರ್ನಾಟಕದಲ್ಲಿ ಸರಕಾರ ರಚಿಸಿಯೇ ತೀರುತ್ತೇನೆ ಎಂಬ ಬಿಜೆಪಿಯ ಅರ್ಥಹೀನ ಹಠ ನಮ್ಮ ಸಂವಿಧಾನವನ್ನು ಅಣಕವಾಡಿದಂತೆ. ಇಂದು ಬೆಳಿಗ್ಗೆ ಬಿಜೆಪಿ ತನ್ನ ಟೊಳ್ಳು ವಿಜಯವನ್ನು ಆಚರಿಸುತ್ತಿದ್ದಂತೆಯೇ ಭಾರತ ಪ್ರಜಾಸತ್ತೆಯ ಸೋಲಿಗಾಗಿ ದುಃಖಿಸುತ್ತಿದೆ'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ರಾಹುಲ್ ಟ್ವೀಟ್ ಗೆ ಪ್ರತಿಯಾಗಿ ತಿರುಗೇಟು ನೀಡಿ ಟ್ವೀಟ್ ಮಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಪಕ್ಷ ಜೆಡಿಎಸ್ ಗೆ ನೀಡಿದ ಬೆಂಬಲ 'ನಾಚಿಕೆಗೇಡು' ಎಂದಿದ್ದಾರೆ. ಬಿಜೆಪಿಗೆ 104 ಸ್ಥಾನಗಳು ಸಿಕ್ಕಿದ್ದರೆ ಕಾಂಗ್ರೆಸ್ ಗೆ 2013ರಲ್ಲಿದ್ದ 122ರಿಂದ ಈಗ 78 ಸ್ಥಾನಗಳಿಗೆ ಇಳಿದಿದೆ,'' ಎಂದವರು ಹೇಳಿದ್ದಾರೆ.
"ಕರ್ನಾಟಕದ ಕಲ್ಯಾಣದ ಬಗ್ಗೆ ಯೋಚಿಸದೆ ತಮ್ಮ ತುಚ್ಛ ರಾಜಕೀಯ ಲಾಭಗಳಿಗಾಗಿ ಹತಾಶ ಕಾಂಗ್ರೆಸ್ ಜೆಡಿಎಸ್ ಗೆ ಅವಕಾಶವಾದಿ ಆಫರ್ ಒಂದನ್ನು ಮಾಡಿದ ನಿಮಿಷವೇ `ಪ್ರಜಾಪ್ರಭುತ್ವದ ಕೊಲೆಯಾಗಿದೆ. ನಾಚಿಕೆಗೇಡು,'' ಎಂದು ಶಾ ಟ್ವೀಟ್ ಮಾಡಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಪಿ ಚಿದಂಬರಂ ಕೂಡ ಟ್ವೀಟ್ ಮಾಡಿ "ನಾನು ಯಡಿಯೂರಪ್ಪ ಆಗಿದ್ದರೆ ಶುಕ್ರವಾರ 10.30ರ ಸುಪ್ರೀಂ ಕೋರ್ಟ್ ವಿಚಾರಣೆ ನಂತರವೇ ಪ್ರಮಾಣವಚನ ಸ್ವೀಕರಿಸುತ್ತಿದ್ದೆ. ರಾಜ್ಯಪಾಲರಿಗೆ ಯಡಿಯೂರಪ್ಪ ನೀಡಿರುವ ಪತ್ರದಲ್ಲಿ 104ಕ್ಕಿಂತ ದೊಡ್ಡ ಸಂಖ್ಯೆಯಿಲ್ಲ. ರಾಜ್ಯಪಾಲರ ಆಹ್ವಾನ ಕೂಡ ಯಾವುದೇ ಸಂಖ್ಯೆ ಉಲ್ಲೇಖಿಸಿಲ್ಲ,'' ಎಂದಿದ್ದಾರೆ.







