ಮಡಿಕೇರಿ: ಲಾರಿಗಳ ನಡುವೆ ಭೀಕರ ಅಪಘಾತ; ಇಬ್ಬರ ಸ್ಥಿತಿ ಗಂಭೀರ

ಮಡಿಕೇರಿ,ಮೇ.17: ಸರಕು ತುಂಬಿದ ಎರಡು ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಚಾಲಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಡಿಕೇರಿ ಸಮೀಪದ ಬೋಯಿಕೇರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಗುರುವಾರ ಬೆಳಗ್ಗೆ 5 ಗಂಟೆ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎರಡು ಲಾರಿಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ತೀವ್ರ ಗಾಯಗೊಂಡ ಕಂಟೈನರ್ ಚಾಲಕ ಪ್ರಸಾದ್ ಸಕಲೇಶಪುರ ಹಾಗೂ ಲಾರಿ ಚಾಲಕ ನೀರಜ್ ರೆಡ್ಡಿ ಎಂಬವರನ್ನು ಹೊರ ತೆಗೆಯಲು ಸಾರ್ವಜನಿಕರು ಮತ್ತು ಸ್ಥಳೀಯರು ಸುಮಾರು ಒಂದು ಗಂಟೆ ಕಾಲ ಹರಸಾಹಸ ಪಟ್ಟರು.
ಮಂಗಳೂರಿನಿಂದ ಮೈಸೂರು ಕಡೆಗೆ ಸರಕು ಸಾಗಿಸುತ್ತಿದ್ದ ಲಾರಿ (ಎ.ಪಿ. 20 ಟಿಎ 2526) ಹಾಗೂ ಮೈಸೂರು ಕಡೆಯಿಂದ ಮಂಗಳೂರು ಬಂದರಿಗೆ ಸರಕು ಸಾಗಿಸುತ್ತಿದ್ದ ಕಂಟೇನರ್ (ಕೆ.ಎ.19 ಸಿ 9602) ಲಾರಿಗಳ ನಡುವೆ ಬೊಯಿಕೇರಿ ಇಳಿಜಾರು ರಸ್ತೆಯಲ್ಲಿ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಂಟೇನರ್ ಲಾರಿಯ ಕ್ಯಾಬೀನ್ ಸಂಪೂರ್ಣ ತುಂಡರಿಸಿ ರಸ್ತೆ ಬದಿಗೆ ವಾಲಿಕೊಂಡಿದೆ. ಈ ಸಂದರ್ಭ ಎರಡು ಲಾರಿಗಳ ಚಾಲಕರು ಕಾಲುಗಳು ಮುರಿಯಲ್ಪಟ್ಟ ಸ್ಥಿತಿಯಲ್ಲಿ ಕ್ಯಾಬೀನ್‍ನೊಳಗೆ ಸಿಲುಕಿಕೊಂಡಿದ್ದರು. ತಕ್ಷಣವೇ ಸ್ಥಳೀಯ ನಿವಾಸಿಗಳು ಚಾಲಕರ ರಕ್ಷಣೆಗೆ ಮುಂದಾದರು. ಆದರೆ ಜಖಂಗೊಂಡ ಲಾರಿಗಳಿಂದ ಚಾಲಕರನ್ನು ಹೊರತೆಗೆಯಲು ತಕ್ಷಣಕ್ಕೆ ಸಾಧ್ಯವಾಗಲಿಲ್ಲ.
ಬಳಿಕ ಗ್ಯಾಸ್ ಕಟ್ಟರ್ ಗಳನ್ನು ಬಳಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸಪಟ್ಟು ಕ್ಯಾಬೀನ್‍ಗಳನ್ನು ತುಂಡರಿಸಿ ಚಾಲಕರನ್ನು ಹೊರತೆಗೆಯುವಲ್ಲಿ ಸಾರ್ವಜನಿಕರು ಸಫಲರಾದರು. ತೀವ್ರ ಗಾಯಗೊಂಡ ಚಾಲಕರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಲಾರಿಗಳ ಮುಖಾಮುಖಿ ಢಿಕ್ಕಿಯಿಂದ ಎರಡು ಗಂಟೆಗೂ ಹೆಚ್ಚು ಕಾಲ ಮೈಸೂರು-ಮಡಿಕೇರಿ-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







