ಮುಂದೂಡಲಾಗಿದ್ದ ಜಯನಗರ, ಆರ್.ಆರ್ ನಗರ ಕ್ಷೇತ್ರಗಳ ಚುನಾವಣಾ ದಿನಾಂಕ ಪ್ರಕಟ
ರಾಜ್ಯ ವಿಧಾನಸಭಾ ಚುನಾವಣೆ

ಬೆಂಗಳೂರು, ಮೇ 17: ಜಯನಗರ ಹಾಗೂ ಆರ್.ಆರ್‌ನಗರ ವಿಧಾನ ಕ್ಷೇತ್ರದ ಚುನಾವಣೆಗೆ ದಿನಗಣನೆ ಆರಂಭಗೊಂಡಿದೆ.
ಬಿಜೆಪಿ ಅಭ್ಯರ್ಥಿ ಬಿ.ಎನ್.ವಿಜಯ್ ಕುಮಾರ್ ಅಕಾಲಿಕ ನಿಧನದಿಂದ ಮುಂದೂಡಲಾಗಿದ್ದ, ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಮೇ 18 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ನಾಮಪತ್ರ ವಾಪಸ್ ಪಡೆಯಲು ಮೇ 25 ಕೊನೆ ದಿನವಾಗಿದ್ದು, ಜೂನ್ 11ರಂದು ಚುನಾವಣೆ ನಡೆಯಲಿದೆ.
ಅದೇ ರೀತಿ, ಮತದಾರರ ಗುರುತಿನ ಚೀಟಿ ಅಕ್ರಮ ಪ್ರಕರಣ ಸಂಬಂಧ ಮುಂದೂಡಲಾಗಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಮೇ 28ರಂದು ಚುನಾವಣೆ ನಡೆಯಲಿದೆ. ಈ ಎರಡು ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಜೂ.12ರಂದು ಹೊರಬೀಳಲಿದೆ.
ವಿಶ್ವಾಸಮತ ಯಾಚನೆಗೆ ಶಾಸಕರ ಕೊರತೆ ಎದುರಿಸುತ್ತಿರುವ ಬಿಜೆಪಿ ರಾಜರಾಜೇಶ್ವರಿನಗರ ಮತ್ತು ಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸುತ್ತಿದೆ.
ಬಿಜೆಪಿ ಅಭ್ಯರ್ಥಿಗಳು?: ಬಿ.ಎನ್.ವಿಜಯ್ ಕುಮಾರ್ ನಿಧನದಿಂದ ಮುಂದೂಡಲ್ಪಟ್ಟಿರುವ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ, ಮಾಜಿ ಮೇಯರ್ ಎಸ್.ಕೆ.ನಟರಾಜ್, ಬಿಬಿಎಂಪಿ ಮಾಜಿ ಸದಸ್ಯ ಸಿ.ಕೆ.ರಾಮಮೂರ್ತಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಅದೇ ರೀತಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಹೋರಾಟಗಾರ ರವಿಕೃಷ್ಣಾರೆಡ್ಡಿ ಸ್ಪರ್ಧೆ ಮಾಡಲಿದ್ದಾರೆ.
ರಾಜರಾಜೇಶ್ವರಿನಗರದಲ್ಲಿ ಚುನಾವಣೆಯನ್ನು ಮುಂದೂಡಿರುವುದರಿಂದ ಈಗಾಗಲೇ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‌ನ ಮುನಿರತ್ನ, ಬಿಜೆಪಿಯ ತುಳಸಿ ಮುನಿರಾಜುಗೌಡ ಹಾಗೂ ಜೆಡಿಎಸ್‌ನ ರಾಮಚಂದ್ರ ಅವರೇ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ.







