ಕಾಂಗ್ರೆಸ್ ಜೆಡಿಎಸ್ ಜೊತೆ ಸಮಯಸಾಧಕ ಮೈತ್ರಿಯನ್ನು ಮಾಡಿಕೊಂಡಾಗಲೇ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ
ಅಮಿತ್ ಶಾ ತಿರುಗೇಟು

ಹೊಸದಿಲ್ಲಿ,ಮೇ 17: ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂಬ ಕಾಂಗ್ರೆಸ್ ಆರೋಪಕ್ಕೆ ಗುರುವಾರ ತಿರುಗೇಟು ನೀಡಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು,ಹತಾಶ ಕಾಂಗ್ರೆಸ್ ಪಕ್ಷವು ಜುಜುಬಿ ರಾಜಕೀಯ ಲಾಭಕ್ಕಾಗಿ ಕರ್ನಾಟಕದಲ್ಲಿ ಸರಕಾರ ರಚನೆಗಾಗಿ ಜೆಡಿಎಸ್ ಜೊತೆ ಸಮಯಸಾಧಕ ಮೈತ್ರಿ ಮಾಡಿಕೊಂಡಾಗಲೇ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿತ್ತು ಎಂದು ಟೀಕಿಸಿದ್ದಾರೆ.
ಸರಕಾರ ರಚನೆಗೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಆಹ್ವಾನಿಸುವ ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ ಅವರ ನಿರ್ಧಾರವು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಮತ್ತು ಸಂವಿಧಾನದ ತುಳಿತವಾಗಿದೆ ಎಂದು ಕಾಂಗ್ರೆಸ್ ಬುಧವಾರ ಬಣ್ಣಿಸಿತ್ತು.
ಈ ಆರೋಪಕ್ಕೆ ಟ್ವೀಟ್‌ನಲ್ಲಿ ತಿರುಗೇಟು ನೀಡಿರುವ ಶಾ,ಕರ್ನಾಟಕದಲ್ಲಿ ಜನಾದೇಶ ಯಾರಿಗೆ ಲಭಿಸಿದೆ? 104 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೋ ಅಥವಾ ತನ್ನ ಮುಖ್ಯಮಂತ್ರಿ ಮತ್ತು ಸಚಿವರು ಭಾರೀ ಅಂತರದೊಂದಿಗೆ ಸೋಲನ್ನಪ್ಪುವುದರೊಂದಿಗೆ 122 ಸ್ಥಾನಗಳಿಂದ 78 ಸ್ಥಾನಗಳಿಗೆ ಕುಸಿದಿರುವ ಕಾಂಗ್ರೆಸ್ ಪಕ್ಷಕ್ಕೋ? ಜೆಡಿಎಸ್ ಕೇವಲ 37 ಸ್ಥಾನಗಳನ್ನು ಗೆದ್ದಿದೆ ಮತ್ತು ಹಲವೆಡೆಗಳಲ್ಲಿ ಅದರ ಅಭ್ಯರ್ಥಿಗಳು ಠೇವಣಿಗಳನ್ನು ಕಳೆದುಕೊಂಡಿದ್ದಾರೆ. ಜನರು ಇದನ್ನೆಲ್ಲ ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿವಂತರಿದ್ದಾರೆ ಎಂದು ಹೇಳಿದ್ದಾರೆ.







