ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ಆರೆಸ್ಸೆಸ್ ತನ್ನ ಜನರನ್ನು ತುಂಬುತ್ತಿದೆ: ರಾಹುಲ್ ಗಾಂಧಿ

ಹೊಸದಿಲ್ಲಿ,ಮೇ 17: ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕ ಆರೆಸ್ಸೆಸ್‌ನಡಿ ದೇಶದಲ್ಲಿಯ ಪ್ರಜಾಸತ್ತಾತ್ಮಕ ಸಂಸ್ಥೆಗಳ ಇಂದಿನ ಸ್ಥಿತಿಯು ಪಾಕಿಸ್ತಾನದಲ್ಲಿನ ಸ್ಥಿತಿಯನ್ನು ನೆನಪಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ತೀವ್ರ ಟೀಕಾಪ್ರಹಾರ ನಡೆಸಿದರು. ಬಿಜೆಪಿ ಮತ್ತು ಆರೆಸ್ಸೆಸ್ ತಮ್ಮ ಜನರನ್ನು ತುಂಬುವ ಮೂಲಕ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ವಶಪಡಿಸಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದರು.
ಸಾಮಾನ್ಯವಾಗಿ ಜನರು ನ್ಯಾಯವನ್ನು ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುತ್ತಾರೆ. ಆದರೆ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ತಮಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅವಕಾಶ ನೀಡಲಾಗುತ್ತಿಲ್ಲ ಎಂದು ಬಹಿರಂಗವಾಗಿ ದೂರಿಕೊಂಡಿದ್ದನ್ನು ದೇಶವು ಕಂಡಿದೆ ಎಂದು ಹೇಳುವ ಮೂಲಕ ರಾಹುಲ್,ನ್ಯಾಯಾಂಗದ ಸ್ವಾತಂತ್ರದಲ್ಲಿ ಹಸ್ತಕ್ಷೇಪ ನಡೆಯುತ್ತಿದೆ ಎಂದು ಬೆಟ್ಟು ಮಾಡಿದರು.
ಇಂತಹ ವಿದ್ಯಮಾನಗಳು ಸಾಮಾನ್ಯವಾಗಿ ನಿರಂಕುಶ ಪ್ರಭುತ್ವವಿರುವ ದೇಶಗಳಲ್ಲಿ ನಡೆಯುತ್ತವೆ. ಪಾಕಿಸ್ತಾನ ಮತ್ತು ಆಫ್ರಿಕಾದಲ್ಲಿ ಹೀಗೆ ಆಗಿದೆ. ಆದರೆ ಭಾರತದಲ್ಲಿ 70 ವರ್ಷಗಳಲ್ಲಿ ಮೊದಲ ಬಾರಿಗೆ ನಡೆದಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನಾಲ್ವರು ಅತ್ಯಂತ ಹಿರಿಯ ನ್ಯಾಯಾಧೀಶರು ನಡೆಸಿದ್ದ ಅಭೂತಪೂರ್ವ ಸುದ್ದಿಗೋಷ್ಠಿಯನ್ನು ಪ್ರಸ್ತಾಪಿಸಿ ಅವರು ಹೇಳಿದರು.
ಆರೆಸ್ಸೆಸ್ ತನ್ನ ಜನರನ್ನು ತುಂಬುವ ಮೂಲಕ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ವಶಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು ಇದರ ಉದ್ದೇಶವನ್ನು ಪ್ರಶ್ನಿಸಿದರು. ಈ ಸಂಸ್ಥೆಗಳೇನು? ಪತ್ರಿಕೆಗಳು,ಯೋಜನಾ ಆಯೋಗ ಮುಂತಾದವೆಲ್ಲ ಭಾರತದ ಧ್ವನಿಗಳಾಗಿವೆ.ಚೀನಾ ಮತ್ತು ಭಾರತದಿಂದ ತಕ್ಷಣದ ಬೆದರಿಕೆಗಳಿವೆ ಎಂದು ಅಮೆರಿಕದ ಅಧ್ಯಕ್ಷರು ಹೇಳಿದರೆ ಅದಕ್ಕೆ ಅವರು ಈ ಧ್ವನಿಯನ್ನು ಆಲಿಸುತ್ತಿದ್ದಾರೆ ಎನ್ನವುದು ಕಾರಣವಾಗಿದೆ ಎಂದರು.
ಆರೆಸ್ಸೆಸ್ ಮತ್ತು ಬಿಜೆಪಿ ಬಡವರ ಸಂಕಷ್ಟಗಳನ್ನು ಆಲಿಸಲು ಬಯಸುತ್ತಿಲ್ಲ. ರೋಹಿತ ವೇಮುಲನಂತಹ ಯುವಜನರು ಕನಸುಗಳನ್ನು ಕಾಣುವುದನ್ನು ಅವರು ಬಯಸುವುದಿಲ್ಲ ಎಂದರು.
‘ಪ್ರಜಾಪ್ರಭುತ್ವದ ಸೋಲನ್ನು ಭಾರತವು ಶೋಕಿಸಲಿದೆ’
ಹೊಸದಿಲ್ಲಿ,ಮೇ 17: ಗುರುವಾರ ಬೆಳಿಗ್ಗೆ ಬಿ.ಎಸ್ ಯಡಿಯೂರಪ್ಪ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಿಗೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು,ಈ ಕಾರ್ಯಕ್ರಮವು ಪ್ರಜಾಪ್ರಭುತ್ವದ ಸೋಲಿನ ಶೋಕಾಚರಣೆಯಾಗಿದೆ ಎಂದು ಟ್ವೀಟಿಸಿದ್ದಾರೆ.
ಸಂವಿಧಾನದ ಮೇಲೆ ಇಂದು ತೀವ್ರ ದಾಳಿ ನಡೆಯುತ್ತಿದೆ. ಕರ್ನಾಟಕದಲ್ಲಿ ಶಾಸಕರೆಲ್ಲ ಒಂದು ಕಡೆಯಲ್ಲಿದ್ದರೆ ರಾಜ್ಯಪಾಲರು ಇನ್ನೊಂದು ಕಡೆಯಲ್ಲಿದ್ದಾರೆ. ತನ್ನ ಶಾಸಕರಿಗೆ 100 ಕೋ.ರೂ.ಗಳ ಆಮಿಷವನ್ನೊಡ್ಡಲಾಗಿದೆ ಎಂದು ಜೆಡಿಎಸ್ ಹೇಳಿದೆ ಎಂದು ಅತ್ತ ಛತ್ತೀಸ್‌ಗಡದಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಹೇಳಿದರು.







