ಮಹಾತ್ಮಾ ಗಾಂಧಿಯನ್ನು ರೈಲಿನಿಂದ ಹೊರದೂಡಿದ ದಿನದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಸುಶ್ಮಾ ಭಾಗಿ

ಜೊಹನಸ್‌ಬರ್ಗ್, ಮೇ 17: ದಕ್ಷಿಣ ಆಫ್ರಿಕದ ಪೀಟರ್ಸ್‌ಬರ್ಗ್‌ನಲ್ಲಿ ರೈಲಿನ ಬಿಳಿಯರಿಗಾಗಿ ಮಾತ್ರ ಮೀಸಲಿಟ್ಟಿದ್ದ ಬೋಗಿಯಿಂದ ಮಹಾತ್ಮಾ ಗಾಂಧಿಯನ್ನು ಹೊರದೂಡಲ್ಪಟ್ಟ ಘಟನೆಯ 125ನೇ ಸ್ಮರಣಾ ಕಾರ್ಯಕ್ರಮದಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಪಾಲ್ಗೊಳ್ಳಲಿದ್ದಾರೆ.
1893ರ ಜೂನ್ 7ರಂದು ರೈಲಿನಲ್ಲಿ ಸೀಟು ಬಿಟ್ಟುಕೊಡಲಿಲ್ಲ ಎಂಬ ಕಾರಣಕ್ಕೆ ವಕೀಲರಾಗಿದ್ದ ಮೋಹನದಾಸ ರಮಚಂದ ಗಾಂಧಿಯನ್ನು ರೈಲಿನಿಂದ ಹೊರದೂಡಲಾಗಿತ್ತು. ಈ ಘಟನೆಯು ಗಾಂಧೀಜಿ ತಮ್ಮ ಸತ್ಯಾಗ್ರಹ ತತ್ವವನ್ನು ಬಲಪಡಿಸಿ ಶಾಂತಿಯುತ ಪ್ರತಿರೋಧದ ಮೂಲಕ ದಕ್ಷಿಣ ಆಫ್ರಿಕ ಮತ್ತು ಭಾರತದಲ್ಲಿ ಬ್ರಿಟಿಷರ ದಬ್ಬಾಳಿಕೆಯನ್ನು ವಿರೋಧಿಸಲು ಪ್ರೇರಣೆಯಾಯಿತು. ಎರಡು ದಿನಗಳ ಕಾಲ ನಡೆಯುವ ಸ್ಮರಣೆ ಕಾರ್ಯಕ್ರಮವು ಭೋಜನಕೂಟದೊಂದಿಗೆ ಆರಂಭವಾಗಲಿದ್ದು ಜೂನ್ 6ರಂದು ಸ್ವರಾಜ್ ಹಾಗೂ ಇತರ ಗಣ್ಯರು ಸುಮಾರು 500ರಷ್ಟಿರುವ ಅತಿಥಿಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಭಾರತೀಯ ರಾಯಬಾರಿ ರುಚಿರ ಕಾಂಬೋಜ್ ತಿಳಿಸಿದ್ದಾರೆ. ಮರುದಿನ ದಕ್ಷಿಣ ಆಫ್ರಿಕದ ರಾಜಕಾರಣಿಗಳೂ ಸೇರಿದಂತೆ ಸುಮಾರು 300 ಗಣ್ಯರು ಸ್ವರಾಜ್ ಜೊತೆ ಪೆಂಟ್ರಿಚ್ ರೈಲು ನಿಲ್ದಾಣದಿಂದ ಪೀಟರ್ಸ್‌ಬರ್ಗ್ ನಿಲ್ದಾಣದ ವರೆಗೆ ಸಾಂಕೇತಿಕ ರೈಲು ಪ್ರಯಾಣ ನಡೆಸಲಿದ್ದಾರೆ. ಈ ಕಾರ್ಯಕ್ರಮದ ಪ್ರಯುಕ್ತ ರೈಲಿನ ಭೋಗಿಗಳು ಮತ್ತು ಇಂಜಿನನ್ನು ಖಾದಿ ಬಟ್ಟೆಯಿಂದ ಸಿಂಗಾರ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.





