ಬೀಚ್‌ಗಳು, ನದಿತೀರಗಳನ್ನು ಸ್ವಚ್ಛಗೊಳಿಸಲು 19 ತಂಡಗಳ ರಚನೆ: ಪರಿಸರ ಸಚಿವಾಲಯ

ಹೊಸದಿಲ್ಲಿ, ಮೇ 17: ಜೂನ್ ಐದರಂದು ಆಚರಿಸಲಾಗುವ ವಿಶ್ವ ಪರಿಸರ ದಿನದ ಅಂಗವಾಗಿ 24 ಬೀಚ್‌ಗಳು ಹಾಗೂ ಅಷ್ಟೇ ಸಂಖ್ಯೆಯ ನದಿತೀರಗಳು ಮತ್ತು ಸರೋವರಗಳನ್ನು ಸ್ವಚ್ಛಗೊಳಿಸುವ ಸಲುವಾಗಿ ಹತ್ತೊಂಬತ್ತು ತಂಡಗಳನ್ನು ರಚಿಸಲಾಗಿದೆ ಎಂದು ಪರಿಸರ ಸಚಿವಾಲಯ ತಿಳಿಸಿದೆ. ವಿಶ್ವಸಂಸ್ಥೆ ಪರಿಸರದ ಕುರಿತು ಆಯೋಜಿಸುವ ಅತ್ಯಂತ ದೊಡ್ಡ ಆಚರಣೆಯಾಗಿರುವ ವಿಶ್ವ ಪರಿಸರ ದಿನದ ಜಾಗತಿಕ ನಿರೂಪಣೆಯ ಹೊಣೆ ಈ ಬಾರಿ ಭಾರತದ ಮೇಲಿದೆ. ಈ ಬಾರಿಯ ಪರಿಸರ ದಿನದ ಥೀಮ್, ಪ್ಲಾಸ್ಟಿಕ್ ಮಾಲಿನ್ಯಕ್ಕೆ ತಡೆ.
ಕರಾವಳಿ ರಾಜ್ಯಗಳಲ್ಲಿರುವ 24 ಬೀಚ್‌ಗಳ ಮತ್ತು 19 ರಾಜ್ಯಗಳಲ್ಲಿ ಗುರುತಿಸಲಾಗಿರುವ 24 ನದಿತೀರಗಳ ಸ್ವಚ್ಛತೆಯ ಕಾರ್ಯವನ್ನು ಈ ತಂಡಗಳು ನಡೆಸಲಿವೆ. ದಿಲ್ಲಿಯ ಯಮುನಾ ನದಿತೀರದಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ನಡೆಸಲಾಗುವುದು ಜೊತೆಗೆ ಸರೋವರಗಳು ಮತ್ತು ಇತರ ಜಲಮೂಲಗಳನ್ನೂ ಗುರುತಿಸಲಾಗಿದ್ದು ಅವುಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಈ ತಂಡಗಳಲ್ಲಿ ಸಚಿವಾಲಯದ ಹಿರಿಯ ಅಧಿಕಾರಿಗಳು, ರಾಜ್ಯ ನೋಡಲ್ ಸಂಸ್ಥೆಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಕರಾವಳಿಯುದ್ದಕ್ಕೂ ಇರುವ ಮೀನುಗಾರಿಕಾ ಕಾಲೇಜುಗಳು ಹಾಗೂ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಅಧಿಕಾರಿಗಳು ಇರಲಿದ್ದಾರೆ.
ಈ ತಂಡಗಳು ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಮತ್ತು ಸ್ಥಳೀಯ ಸಮುದಾಯದ ಜನರನ್ನು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲಿದೆ ಎಂದು ಸಚಿವಾಲಯ ತಿಳಿಸಿದೆ.
ತಮ್ಮ ಸಂಸ್ಥೆಗಳನ್ನು ಪ್ಲಾಸ್ಟಿಕ್‌ಮುಕ್ತಗೊಳಿಸುವಂತೆ ಕೋರಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗೆ ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ಪತ್ರವನ್ನು ಬರೆದಿದ್ದಾರೆ. ಪ್ಲಾಸ್ಟಿಕ್‌ಮುಕ್ತವಾಗುವ ಶಾಲಾ-ಕಾಲೇಜುಗಳನ್ನು ಸಚಿವಾಲಯವು ಗುರುತಿಸಿ ಗ್ರೀನ್ ಸ್ಕೂಲ್ ಅಥವಾ ಕಾಲೇಜು ಪ್ರಮಾಣಪತ್ರವನ್ನು ನೀಡಲಿದೆ ಎಂದು ಸಚಿವಾಲಯ ತಿಳಿಸಿದೆ. ಈ ಸಂಬಂಧ ಜೂನ್ ಮೂರರಂದು ಮಿನಿ ಮ್ಯಾರಥಾನ್ ನಡೆಯಲಿದ್ದು ಇದರಲ್ಲಿ ದಿಲ್ಲಿ ಶಾಲೆಯ ಮತ್ತು ಕಾಲೇಜಿನ ಮಕ್ಕಳು ಪಾಲ್ಗೊಳ್ಳಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.







