ಜೆಡಿಎಸ್-ಕಾಂಗ್ರೆಸ್ ಶಾಸಕರು ಕೊಚ್ಚಿಗೆ ಪ್ರಯಾಣ

ಬೆಂಗಳೂರು, ಮೇ 17: ಬಿಜೆಪಿಯ ಕುದುರೆ ವ್ಯಾಪಾರ ತಂತ್ರವನ್ನು ತಪ್ಪಿಸಲು ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ದಿಢೀರ್ ಬೆಳವಣಿಗೆಯೊಂದರಲ್ಲಿ ಗುರುವಾರ ರಾತ್ರಿ ಬೆಂಗಳೂರಿನಿಂದ ವಿಶೇಷ ವಿಮಾನ ನಿಲ್ದಾಣದಿಂದ ಕೇರಳದ ಕೊಚ್ಚಿಗೆ ಪ್ರಯಾಣ ಬೆಳೆಸಿದರು.
ಇಲ್ಲಿನ ಶಾಂಗ್ರಿಲಾ ಹೊಟೇಲ್‌ನಿಂದ ಜೆಡಿಎಸ್ ಶಾಸಕರು ಹಾಗೂ ರಾಮನಗರದ ಬಳಿಯ ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಿಂದ ಕಾಂಗ್ರೆಸ್ ಶಾಸಕರು ಪ್ರತ್ಯೇಕವಾಗಿ ಬಸ್‌ಗಳಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಕೊಚ್ಚಿಯ ವಿವಿಧ ಹೊಟೇಲ್‌ಗಳಲ್ಲಿ ವಾಸ್ತವ್ಯ ಮಾಡಲಿದ್ದಾರೆಂದು ಗೊತ್ತಾಗಿದೆ.
ಶಾಸಕರಿಗೆ ಆಮಿಷ: ಈ ಮಧ್ಯೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಆಪ್ತ ಸುಭಾಷ್ ಎಂಬವರು ಪಾವಗಡ ಹಾಗೂ ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ವೆಂಕಟರಮಣಪ್ಪ ಮತ್ತು ಶಿವಶಂಕರರೆಡ್ಡಿ ಅವರಿಗೆ ಬಿಜೆಪಿಗೆ ಬರುವಂತೆ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಸುಭಾಷ್ ಎಂಬವರು ಉಭಯ ಶಾಸಕರ ಆಪ್ತ ಕಾರ್ಯದರ್ಶಿಗಳಾದ ಶಂಕರರೆಡ್ಡಿ ಮತ್ತು ನರಸಿಂಹಮೂರ್ತಿ ಅವರಿಗೆ ಕರೆ ಮಾಡಿ ‘ಅವರೊಂದಿಗೆ ಸಮಾಲೋಚನೆ ನಡೆಸಿದ್ದೀರಾ..ಏನಾಯಿತು. ನೋಡಿ ಆಲೋಚನೆ ಮಾಡಿ, ಬಿಜೆಪಿಗೆ ಬಂದರೆ ಅನುಕೂಲ ಆಗುತ್ತದೆ’ ಎಂದು ಸಂಭಾಷಣೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.







