ಪಕ್ಷವನ್ನು ಮಣ್ಣು ಮಾಡುವವರು ಹೊರಗಿನವರಲ್ಲ: ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕಾಶಪ್ಪನವರ್
ಬಾಗಲಕೋಟೆ, ಮೇ 17: ಸಿದ್ದರಾಮಯ್ಯನವರನ್ನು ಕೆಲವರು ಸೋಲಿಸಲು ಹೊರಟಿದ್ದರು. ಕಾಂಗ್ರೆಸ್ ಪಕ್ಷವನ್ನು ಮಣ್ಣು ಮಾಡುವವರು ಹೊರಗಿನವರಲ್ಲ, ಬದಲಿಗೆ ಕಾಂಗ್ರೆಸ್‌ನವರೇ ಎಂದು ಹುನಗುಂದ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್ ಆಕ್ರೋಶ ಹೊರಹಾಕಿದ್ದಾರೆ.
ಗುರುವಾರ ತಮ್ಮ ನಿವಾಸದಲ್ಲಿ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರ ವಿರುದ್ಧ ಹರಿಹಾಯ್ದ ಕಾಶಪ್ಪನವರ್ ಬಳಿಕ ಕಣ್ಣೀರು ಸುರಿಸಿದ್ದಾರೆ. ಅಲ್ಲದೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್, ಆರ್.ಬಿ.ತಿಮ್ಮಾಪುರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನನ್ನ ಸೋಲಿಗೂ ಈ ಇಬ್ಬರೇ ಕಾರಣ. ನನ್ನ ಕ್ಷೇತ್ರಕ್ಕೆ ಒಂದೇ ಒಂದು ಬಾರಿ ಕಾಲಿಡಲಿಲ್ಲ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿದ್ದೇನೆಂದು ಅವರು ಆತ್ಮಾವಲೋಕನ ಸಭೆಯಲ್ಲಿ ತಿಳಿಸಿದರು.
ಹುನಗುಂದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಕಾಶಪ್ಪನವರ್, ನಮ್ಮ ಕಾರ್ಯಕರ್ತರಿಗೆ ಏನಾದರೂ ತೊಂದರೆ ಕೊಟ್ಟರೆ ಸುಮ್ಮನಿರೋದಿಲ್ಲ. ನಾವೇನು ಸಮ್ಮನೆ ಕೂರುವುದಿಲ್ಲ. ನಮ್ಮ ತಂಟೆಗೆ ಬಂದರೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.







