ಆವರ್ಸೆ ಸೀತಾನದಿಯಲ್ಲಿ ಮುಳುಗಿ ಯುವಕರಿಬ್ಬರು ಮೃತ್ಯು

ಕೋಟ, ಮೇ 17: ಆವರ್ಸೆ ಹೊಳೆಯಲ್ಲಿ ಈಜಲು ಹೋದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಬಿಲ್ಲಾಡಿ ಗ್ರಾಮದ ಮಣಿಕಲ್ಲು ನಿವಾಸಿ ಪಾರ್ವತಿ ಎಂಬವರ ಪುತ್ರ ಕಿರಣ್ ಪೂಜಾರಿ (22) ಹಾಗೂ ಅವರ ದೊಡ್ಡಮ್ಮನ ಪುತ್ರ ವಿಕ್ರಮ್ ಪೂಜಾರಿ (22) ಎಂದು ಗುರುತಿಸಲಾಗಿದೆ. ಇವರು ಆವರ್ಸೆಯಲ್ಲಿರುವ ಸಂಬಂಧಿಕರ ಮನೆಗೆ ಊಟಕ್ಕೆಂದು ಮಧ್ಯಾಹ್ನ 12:30ಕ್ಕೆ ತೆರಳಿದ್ದರು. ಅಲ್ಲಿ ಅವರಿಬ್ಬರು ಮನೆ ಸಮೀಪದ ಸೀತಾನದಿಗೆ ಸ್ನಾನಕ್ಕೆಂದು ಹೋಗಿದ್ದರು.
ಈ ವೇಳೆ ಇಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾದರೆನ್ನಲಾಗಿದೆ. ಮಧ್ಯಾಹ್ನ 2 ಗಂಟೆಯಾದರೂ ಸ್ನಾನಕ್ಕೆ ಹೋದವರು ಮರಳಿ ಬಾರದನ್ನು ಗಮನಿಸಿದ ಮನೆಯವರು ಹೊಳೆಯ ಬದಿ ಹೋದಾಗ ದಡದಲ್ಲಿ ಬಟ್ಟೆಗಳು ಕಂಡುಬಂದವು. ಬಳಿಕ ಸ್ಥಳೀಯರು ನದಿಯಲ್ಲಿ ಮುಳುಗಿ ಹುಡುಕಾಟ ನಡೆಸಿದಾಗ ಇಬ್ಬರ ಮೃತದೇಹವು ಮಧ್ಯಾಹ್ನ 3:30ರ ಸುಮಾರಿಗೆ ಪತ್ತೆಯಾಯಿತು.
ವಿಕ್ರಮ್ ಪೂಜಾರಿ ಸ್ಥಳೀಯವಾಗಿ ಖಾಸಗಿ ಬಸ್‌ನಲ್ಲಿ ನಿರ್ವಾಹಕರಾಗಿ ದುಡಿಯುತ್ತಿದ್ದರೆ, ಕಿರಣ್ ಪೂಜಾರಿ ಸಾಬರಕಟ್ಟೆಯ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ತಂದೆ ಇಲ್ಲದ ಈ ಇಬ್ಬರು ಯುವಕರು ಮನೆಗೆ ಆಧಾರ ಸ್ತಂಭವಾಗಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





