ತುಮಕೂರು: ಮುಖ್ಯಮಂತ್ರಿ ಬಿ.ಎಸ್.ವೈ ಸಿದ್ದಗಂಗಾ ಮಠಕ್ಕೆ ಭೇಟಿ

ತುಮಕೂರು,ಮೇ.17: ರಾಜ್ಯದ 23 ನೇ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಸಂಜೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶತಾಯುಷಿ ಡಾ.ಶ್ರೀಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಬೆಳಗ್ಗೆಯಿಂದ ವಿವಿಧ ಸಭೆಗಳಲ್ಲಿ ಭಾಗವಹಿಸಿದ್ದ ಅವರು ಸಂಜೆ 6 ಗಂಟೆ ವೇಳೆಗೆ ಒಂಟಿಯಾಗಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದರು. ಶ್ರೀಮಠಕ್ಕೆ ಆಗಮಿಸಿದ ಬಿ.ಎಸ್.ವೈ ತಮ್ಮ ಕಾರ್ಯಾಲಯದಲ್ಲಿ ಕಾರ್ಯನಿಮಿತ್ತರಾಗಿದ್ದ 111 ವರ್ಷಗಳ ಡಾ.ಶ್ರೀಶಿವಕುಮಾರಸ್ವಾಮೀಜಿಗಳನ್ನು ಭೇಟಿಯಾಗಿ ಅವರ ಯೋಗ ಕ್ಷೇಮ ವಿಚಾರಿಸಿ, ಶಾಲು ಹೊದಿಸಿ ಅಭಿನಂದಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಗುಮೊಗದಿಂದಲೇ ಬರಮಾಡಿಕೊಂಡ ಶ್ರೀಗಳು, ಹೂವಿನ ಹಾರ ಹಾಕಿ, ಫಲ ನೀಡಿ ಆಶೀರ್ವದಿಸಿದರು. ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ಶ್ರೀಗಳೊಂದಿಗೆ ಚರ್ಚಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಯ ನಂಬಿಕೆ ಮತ್ತು ವಿಶ್ವಾಸಕ್ಕೆ ಧಕ್ಕೆಯಾಗದ ರೀತಿ ಅಧಿಕಾರ ನಡೆಸುವುದಾಗಿ ತಿಳಿಸಿದರು. ಪ್ರಧಾನಿ ನರೇಂದ್ರಮೋದಿ ಅವರ ಸಬ್‍ಕಾ ಸಾಥ್, ಸಬ್‍ಕಾ ವಿಕಾಸ್ ಎನ್ನುವ ಪದಕ್ಕೆ ಅರ್ಥ ತರುವ ನಿಟ್ಟಿನಲ್ಲಿ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವ ರೀತಿಯಲ್ಲಿ ಆಡಳಿತ ನಡೆಸಲಿದ್ದು, ಕರ್ನಾಟಕವನ್ನು ಮಾದರಿ ರಾಜ್ಯವಾಗಿ ಮಾಡಲಿದ್ದೆನೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆಶಯದಂತೆ ಕಾಂಗ್ರೆಸ್ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ರಾಜ್ಯದ 6.50 ಕೋಟಿ ಜನತೆ ಆಶೀರ್ವಾದ ಮಾಡಿದ್ದಾರೆ. ಮುಂದಿನ 10-12 ದಿನದಲ್ಲಿ ಸಚಿವ ಸಂಪುಟದ ಸಭೆ ಕರೆದು ಬಹುಮತ ಸಾಭೀತು ಪಡಿಸಲಿದ್ದೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿಕೊಂಡಿರುವ ಅಪವಿತ್ರ ಮೈತ್ರಿಯನ್ನು ಒಪ್ಪುತ್ತಿಲ್ಲ. ಅವರು ಸರಕಾರ ರಚಿಸುವ ಅವಕಾಶವನ್ನೇ ನೀಡುವುದಿಲ್ಲವೆಂದು ಬಿ.ಎಸ್.ವೈ. ಮುಂದಿನ ಎರಡು ದಿನಗಳಲ್ಲಿ ರೈತರು, ನೇಕಾರರ ಸಾಲ ಮನ್ನಾ ಮಾಡಲು ಆದೇಶ ಹೊರಡಿಸಲಿದ್ದೇನೆ. ಅಧಿಕಾರಿಗಳ ಬಳಿ ಸರಿಯಾದ ಅಂಕಿ ಅಂಶ ಇಲ್ಲದ ಕಾರಣ ಇಂದು ಘೋಷಣೆ ಮಾಡಲು ಸಾಧ್ಯವಾಗಿಲ್ಲ. ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಸರಕಾರಿ ನೌಕರರ ಸರಿಸಮನಾಗಿ ವೇತನ ನೀಡುವುದು ಸೇರಿದಂತೆ ಜನತೆಗೆ ನೀಡಿರುವ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.
ಈ ವೇಳೆ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಜೋತಿ ಗಣೇಶ್, ಮಸಾಲೆ ಜಯರಾಮ್, ಮಾಜಿ ಸಂಸದ ಜಿ.ಎಸ್.ಬಸವರಾಜು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.







