ಯಡಿಯೂರಪ್ಪ ಬಹುಮತ ಸಾಬೀತುಪಡಿಸುವುದು ನಿಶ್ಚಿತ: ಬಿ.ವೈ.ರಾಘವೇಂದ್ರ

ಶಿವಮೊಗ್ಗ, ಮೇ 17: 'ರಾಜ್ಯದ ಜನತೆಯ ಅಭಿಲಾಷೆಯಂತೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಬಹುಮತ ಸಾಬೀತುಪಡಿಸುವುದು ನಿಶ್ಚಿತವಾಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಕಾಂಗ್ರೆಸ್-ಜೆಡಿಎಸ್ ಪಕ್ಷದ ಕುತಂತ್ರ ಫಲಿಸುವುದಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಪುತ್ರ, ಮಾಜಿ ಶಾಸಕ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೇಸತ್ತ ರಾಜ್ಯದ ಜನತೆ, ವಿಧಾನಸಭೆ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಜನಾಭಿಪ್ರಾಯಕ್ಕೆ ವಿರುದ್ದವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರ ಹಿಡಿಯಲು ಯತ್ನಿಸುತ್ತಿವೆ. ಈ ಮೂಲಕ ರಾಜ್ಯದ ಜನತೆಗೆ ವಂಚನೆ ಮಾಡಲು ಯತ್ನಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತದಾರರ ಮನ್ನಣೆಯಂತೆ ಬಿ.ಎಸ್.ಯಡಿಯೂರಪ್ಪರವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ರಾಜ್ಯದ ಜನತೆಗೆ ನೀಡಿದ್ದ ಆಶ್ವಾಸನೆಯಂತೆ ಉತ್ತಮ ಆಡಳಿತ ನೀಡಲಿದೆ. ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಎಲ್ಲ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲಿದೆ ಎಂದು ತಿಳಿಸಿದ್ದಾರೆ.
ಸಂತಸವಾಗಿದೆ: ತಂದೆ ಬಿ.ಎಸ್.ಯಡಿಯೂರಪ್ಪರವರು ಮತ್ತೆ ಸಿಎಂ ಆಗುತ್ತಿರುವುದು ಸಹಜವಾಗಿಯೇ ಸಂತಸ ಉಂಟು ಮಾಡಿದೆ. ಅವರ ಅವಧಿಯಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ದಿಯಾಗುವ ವಿಶ್ವಾಸ ತಮ್ಮದಾಗಿದೆ. ಹಾಗೆಯೇ ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿಗೂ ಹೊಸ ವೇಗ ದೊರಕಲಿದೆ. ಈ ಹಿಂದೆ ಬಿಎಸ್‍ವೈ ಸಿ.ಎಂ. ಆಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆದಿದ್ದ ಅಭಿವೃದ್ದಿ ಕೆಲಸಗಳು ಮತ್ತೆ ಜಿಲ್ಲೆಯಲ್ಲಿ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಇದೇ ಸಂದರ್ಭದಲ್ಲಿ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.







