ಚುನಾವಣಾ ಅಕ್ರಮದಿಂದ ತನ್ವೀರ್ ಸೇಠ್ ಗೆಲವು: ಸಂದೇಶ್ ಸ್ವಾಮಿ ಆರೋಪ

ಮೈಸೂರು,ಮೇ.17: ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ತನ್ವೀರ್ ಸೇಠ್ ಹಾಗೂ ಅಧಿಕಾರಿಗಳ ಶಾಮೀಲಿನಿಂದಾಗಿ ಕ್ಷೇತ್ರದಲ್ಲಿ ಸುಮಾರು 30ರಿಂದ 40ರ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿಯ ಫಲಿತಾಂಶ ತಡೆ ಹಿಡಿದು ಅವರನ್ನು ಅನರ್ಹಗೊಳಿಸಬೇಕೆಂದು ಎನ್.ಆರ್.ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಸಂದೇಶ ಸ್ವಾಮಿ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2008, 2013 ಮತ್ತು 2014 ರಲ್ಲಿ 2,11,514, ಮಂದಿ ಮತದಾರರಿದ್ದರು, ಪ್ರಸಕ್ತ ಚುನಾವಣೆಯಲ್ಲಿ 2,61,402 ಮತದಾರರಿದ್ದು, ಮಿಂಚಿನ ನೋಂದಣಿಯಲ್ಲಿ ಕೇವಲ ಮೂರು ತಿಂಗಳಲ್ಲಿ 50 ಸಾವಿರಕ್ಕೂ ಅಧಿಕ ಮತದಾರರು ಸೇರ್ಪಡೆಯಾಗಿರುವುದು ಮತದಾರರ ಪಟ್ಟಿಯಲ್ಲಿನ ಲೋಪ ಹಾಗೂ ಚುನಾವಣಾ ಅಕ್ರಮವನ್ನು ಪುಷ್ಠೀಕರಿಸಿದೆ ಎಂದು ಆರೋಪಿಸಿದರು.
ಅಲ್ಲದೇ ಚುನಾವಣಾ ಪ್ರಚಾರದ ವೇಳೆಯಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ತನ್ವೀರ್ ಸೇಠ್ ಗೆ ಜನವಿರೋಧಿ ಅಲೆಯಿದ್ದು ಗೆಲುವು ಸಾಧ್ಯವಿರಲಿಲ್ಲ. ಅಲ್ಲದೇ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಎಸ್.ಡಿ.ಪಿ.ಐ ಪಕ್ಷಗಳ ನಡುವೆ ನೇರ ಸ್ಪರ್ಧೆಯಿತ್ತು. ಹೀಗಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಚುನಾವಣಾ ಅಕ್ರಮಕ್ಕೆ ಸಾಕ್ಷಿಯಾಗಿದ್ದು, ಈ ಬಗ್ಗೆ ಕೂಲಂಕುಷ ತನಿಖೆಯಾಗಬೇಕು ಎಂದರು.
ಗೆಲುವಿಗಾಗಿ ವಾಮಮಾರ್ಗ ಅನುಸರಿಸಿದ ಕಾಂಗ್ರೆಸ್ ಅಭ್ಯರ್ಥಿಯ ಫಲಿತಾಂಶ ತಡೆ ಹಿಡಿದು ಅನರ್ಹಗೊಳಿಸಿ. ಎರಡನೇ ಸ್ಥಾನದಲ್ಲಿರುವ ತಮ್ಮನ್ನು ವಿಜೇತ ಅಭ್ಯರ್ಥಿಯೆಂದು ಘೋಷಿಸಬೇಕು ಎಂದು ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ, ಇಲ್ಲವಾದಲ್ಲಿ ನ್ಯಾಯಾಂಗ ಹೋರಾಟ ನಡೆಸುವೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸೋ.ಮುರುಳಿ, ನರಸಿಂಹಮೂರ್ತಿ, ಮಂಜು ಸಿ.ಗೌಡ, ರಾಜೇಂದ್ರ ಉಪಸ್ಥಿತರಿದ್ದರು.







