ಮೈಸೂರು: ಇವಿಎಂ ಮತಯಂತ್ರಗಳ ಕುರಿತು ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಧರಣಿ

ಮೈಸೂರು,ಮೇ.17: ಇವಿಎಂ ಮತಯಂತ್ರಗಳು ಹ್ಯಾಕ್ ಆಗಿದ್ದು, ಚುನಾವಣಾ ಪ್ರಕ್ರಿಯೆಯ ಮೇಲೆ ಅನುಮಾನ ಮೂಡಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೆ.ಆರ್. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ಮಾತನಾಡಿ ಇಡೀ ಚುನಾವಣಾ ಪ್ರಕ್ರಿಯೆಯ ಮೇಲೆ ನನಗೆ ನಂಬಿಕೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ತಡರಾತ್ರಿ ನಡೆದ ಘಟನೆ ಪ್ರಜಾಪ್ರಭುತ್ವದ ವ್ಯವಸ್ಥೆಯೇ ತಲೆತಗ್ಗಿಸುವಂತಹ ಪರಿಸ್ಥಿತಿ ಬಂದಿದೆ. ರಾತ್ರಿ ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಇವಿಎಂ ಮತಯಂತ್ರವನ್ನು ಹ್ಯಾಕ್ ಮಾಡುವಂತಹ ನಾಲ್ಕು ಜನ ವ್ಯಕ್ತಿಗಳನ್ನು ಸ್ಥಳೀಯರು ಹಿಡಿದು ವಿಚಾರಣೆ ನಡೆಸಿದಾಗ ಅವರು ಜಿಲ್ಲೆಯ ಹಲವಾರು ಕ್ಷೇತ್ರಗಳಲ್ಲಿ ನಮ್ಮ ಕ್ಷೇತ್ರವೂ ಸೇರಿ ನಾವು ಮತಯಂತ್ರವನ್ನು ಹ್ಯಾಕ್ ಮಾಡಿದ್ದೇವೆಂದು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಇದು ಇಡೀ ಚುನಾವಣೆಯ ಮೇಲೆ ಅನುಮಾನ ಮೂಡುವಂತಹ ಘಟನೆಯಾಗಿದ್ದು, ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ಸ್ಥೀತಿ ನಿರ್ಮಾಣವಾಗಿದೆ. ದೇಶದ ಜನತೆ ಇಡೀ ನಮ್ಮ ವ್ಯವಸ್ಥೆಯ ಮೇಲೆಯೇ ಅನುಮಾನಾಸ್ಪದವಾಗಿ ನೋಡುವಂತಾಗಿದೆ. ಮತದಾನದ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಚುನಾವಣಾ ಪ್ರಕ್ರಿಯೆಯನ್ನು ಸೂಕ್ತವಾಗಿ ತನಿಖೆ ನಡೆಸಿ ಪ್ರಜಾಪ್ರಭುತ್ವದ ಉಳಿವಿಗೆ ಸಹಕರಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಯಲ್ಲಿ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.





