ಕರ್ನಾಟಕ ಎಫೆಕ್ಟ್: ಮಣಿಪುರದಲ್ಲಿ ಸರಕಾರ ರಚನೆಗೆ ಹಕ್ಕು ಮಂಡಿಸಲು ಕಾಂಗ್ರೆಸ್ ಚಿಂತನೆ

ಹೊಸದಿಲ್ಲಿ, ಮೇ 17: ಬಹುಮತದ ಕೊರತೆಯಿದ್ದರೂ, ಬಿಜೆಪಿಗೆ ಅತ್ಯಧಿಕ ಸ್ಥಾನ ಪಡೆದಿರುವ ಪಕ್ಷವೆಂಬ ನೆಪದಲ್ಲಿ ಸರಕಾರ ರಚನೆಗೆ ಆಹ್ವಾನಿಸಿರುವ ರಾಜ್ಯಪಾಲರ ಕ್ರಮದಿಂದ ರೊಚ್ಚಿಗೆದ್ದಿರುವ ಕಾಂಗ್ರೆಸ್ ಪಕ್ಷವು, ಇದೇ ನಿದರ್ಶನವನ್ನು ಮುಂದಿಟ್ಟುಕೊಂಡು ವಿಧಾನಸಭಾ ಚುನಾವಣೆಯಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರಕಾರ ರಚನೆಯಿಂದ ಅವಕಾಶ ನಿರಾಕರಿಸಲ್ಪಟ್ಟ ಗೋವಾ, ಮಣಿಪುರ ಹಾಗೂ ಮೇಘಾಲಯಗಳಲ್ಲಿ ತನಗೆ ಸರಕಾರ ರಚನೆಗೆ ಅವಕಾಶ ನೀಡಬೇಕೆಂದು ಹಕ್ಕೊತ್ತಾಯ ಮಂಡಿಸುವ ಬಗ್ಗೆ ಕಾಂಗ್ರೆಸ್ ಚಿಂತಿಸುತ್ತಿದೆ. ಇತ್ತ ಬಿಹಾರದಲ್ಲಿಯೂ ವಿಧಾನಸಭೆಯಲ್ಲಿ ಅತಿ ದೊಡ್ಡ ರಾಜಕೀಯ ಪಕ್ಷವಾದ ಲಾಲು ಪ್ರಸಾದ್ ನೇತೃತ್ವದ ಆರ್‌ಜೆಡಿ ಕೂಡಾ ಇದೇ ಯೋಚನೆಯನ್ನು ಹೊಂದಿದೆ.
‘‘ ಒಂದು ವೇಳೆ ಕರ್ನಾಟಕದಲ್ಲಿ ಏಕೈಕ ಅತಿ ದೊಡ್ಡ ಪಕ್ಷಕ್ಕೆ ಸರಕಾರ ರಚನೆಗೆ ಅವಕಾಶ ದೊರೆತಿದೆಯಾದರೆ, ಗೋವಾ, ಬಿಹಾರ, ಮಣಿಪುರ ಹಾಗೂ ಮೇಘಾಲಯಗಳಲ್ಲಿರುವ ಸರಕಾರಗಳು ರಾಜೀನಾಮೆ ನೀಡಬೇಕು ಹಾಗೂ ಏಕೈಕ ಅತಿ ದೊಡ್ಡ ಪಕ್ಷಕ್ಕೆ ಅಧಿಕಾರಕ್ಕೇರಲು ದಾರಿಮಾಡಿಕೊಡಬೇಕು’’ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ದಿಲ್ಲಿಯಲ್ಲಿ ತಿಳಿಸಿದ್ದಾರೆ.
ಇತ್ತ ಮಣಿಪುರದಲ್ಲಿ ಕಾಂಗ್ರೆಸ್ ಪಕ್ಷವು ಮಾಜಿ ಮುಖ್ಯಮಂತ್ರಿ ಇಬೊಬಿ ಸಿಂಗ್ ಅವರಿಗೆ, ಶುಕ್ರವಾರ ರಾಜ್ಯಪಾಲರನ್ನು ಭೇಟಿ ಮಾಡಿ ಸರಕಾರ ರಚನೆಗೆ ಹಕ್ಕೊತ್ತಾಯ ಮಂಡಿಸುವಂತೆ ಸೂಚಿಸಿದೆ. ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರಿಗೂ ಇದೇ ಸೂಚನೆಯನ್ನು ಅದು ನೀಡಿದೆ.
ಇತ್ತ ಬಿಹಾರದಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿಕೆಯೊಂದನ್ನು ನೀಡಿ, ವಿಧಾನಸಭೆಯಲ್ಲಿ ತನ್ನ ಪಕ್ಷವು ಸದನದಲ್ಲಿ ಅತ್ಯಧಿಕ ಸಂಖ್ಯಾಬಲವನ್ನು ಹೊಂದಿರುವ ಕಾರಣ, ತಾನು ನೂತನ ಸರಕಾರ ರಚನೆಗೆ ರಾಜ್ಯಪಾಲರ ಮುಂದೆ ಹಕ್ಕೊತ್ತಾಯ ಮಂಡಿಸುವುದಾಗಿ ತಿಳಿಸಿದ್ದಾರೆ.
2015ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಯು ಜೊತೆ ಮಹಾಮೈತ್ರಿಯೇರ್ಪಡಿಸಿಕೊಂಡ ಆರ್‌ಜೆಡಿ ಪಕ್ಷವು ಅತ್ಯಧಿಕ ಸ್ಥಾನಗಳನ್ನು ಗೆದ್ದಿತ್ತು. ಆದರೆ ಕಳೆದ ವರ್ಷ ನಿತೀಶ್ ಕುಮಾರ್ ಕಾಂಗ್ರೆಸ್ ಹಾಗೂ ಆರ್‌ಜೆಡಿ ಮೈತ್ರಿಯನ್ನು ಕಡಿದುಕೊಂಡು,ಸರಕಾರ ವಿಸರ್ಜಿಸಿದರು. ಆನಂತರ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮತ್ತೆ ಅಧಿಕಾರಕ್ಕೇರಿದ್ದರು.
ಮೇಘಾಲಯ, ಮಣಿಪುರ: ಕಾಂಗ್ರೆಸ್‌ಗೆ ಕೈಕೊಟ್ಟ ರಾಜ್ಯಪಾಲರು
ಕಳೆದ ವರ್ಷ ನಡೆದ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 28 ಸ್ಥಾನಗಳನ್ನು ಗೆದ್ದು, ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 21 ಸ್ಥಾನಗಳನ್ನು ಪಡೆದಿತ್ತು. ಚುನಾವಣೆಯ ಬಳಿಕ ಬಿಜೆಪಿಯು ಸಣ್ಣಪುಟ್ಟ ರಾಜಕೀಯ ಪಕ್ಷಗಳ ಜೊತೆ ಕೈಜೋಡಿಸಿ ಸರಕಾರ ರಚನೆಗೆ ಹಕ್ಕು ಮಂಡಿಸಿತ್ತು. ಆಗ ರಾಜ್ಯಪಾಲೆ ನಜ್ಮಾ ಹೆಫ್ತುಲ್ಲಾ ಬಿಜೆಪಿಯನ್ನು ಸರಕಾರ ರಚನೆಗೆ ಆಹ್ವಾನಿಸಿದ್ದರು.
ಕಳೆದ ವರ್ಷ ನಡೆದ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿಯೂ ಚುನಾವಣೆ ನಡೆದ 59 ಕ್ಷೇತ್ರಗಳಲ್ಲಿ ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದು, ಏಕೈಕ ಅತಿ ದೊಡ್ಡ ಪಕ್ಷವಾಗಿ ಮೂಡಿಬಂದಿತ್ತು. ಕಾಂಗ್ರೆಸ್‌ನ ಪ್ರಮುಖ ಪ್ರತಿಸ್ಪರ್ಧಿ ನ್ಯಾಶನಲ್ ಪೀಪಲ್ಸ್ ಪಾರ್ಟಿ 19 ಸ್ಥಾನಗಳಲ್ಲಿ ಜಯಗಳಿಸಿತ್ತು ಕೇವಲ ಎರಡು ಸೀಟುಗಳನ್ನು ಗೆದ್ದ ಬಿಜೆಪಿ ಹಾಗೂ ಎನ್‌ಪಿಪಿಯು ಪಕ್ಷೇತರರ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸಿತ್ತು. ಮೊದಲಿಗೆ ಸರಕಾರ ರಚನೆಗೆ ಕಾಂಗ್ರೆಸ್ ಹಕ್ಕೊತ್ತಾಯ ಮಂಡಿಸಿತ್ತು. ಆದಾಗ್ಯೂ ರಾಜ್ಯಪಾಲ ಗಂಗಾಪ್ರಸಾದ್ ಬಿಜೆಪಿ ಮೈತ್ರಿಕೂಟಕ್ಕೆ ಸಕಾರ ರಚನೆಗೆ ಆಹ್ವಾನ ನೀಡಿದ್ದರು.







