ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ: ಆರಾಧನ ಭಟ್

ಹೆಬ್ರಿ, ಮೇ 18: ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಕ್ರಿಯಾತ್ಮಕ ಚಟುವಟಿಕೆಯಲ್ಲಿ ಸಕ್ರಿಯಾವಾಗಿ ತೊಡಗಿಸಿಕೊಂಡಾಗ ವ್ಯಕ್ತಿತ್ವ ವಿಕಸನ ದೊಂದಿಗೆ ನಾವು ಅಂದು ಕೊಂಡದ್ದನ್ನು ಸಾಧಿಸಲು ಸಾಧ್ಯ ಎಂದು ಟಿವಿ ರಿಯಾಲಿಟಿ ಶೋ ‘ಮಜಾ ಭಾರತ’ ಕಲಾವಿದೆ ಅರಾಧನಾ ಭಟ್ ನಿಡ್ಡೋಡಿ ಹೇಳಿದ್ದಾರೆ.
ಹೆಬ್ರಿ ಚಾಣಕ್ಯ ಏಜ್ಯುಕೇಶನ್ ಅಕಾಡಮಿ ಆಶ್ರಯದಲ್ಲಿ ಕಳೆದ ಒಂದು ತಿಂಗಳಿಂದ ಹಮ್ಮಿಕೊಳ್ಳಲಾದ ಚಾಣಕ್ಯ ನಲಿಕಲಿ-2018 ಬೇಸಗೆ ಶಿಬಿರದ ಅಂಗವಾಗಿ ಶ್ರೀರಾಮ ಟವರ್‌ನ ತ್ರಿಶಾ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಉದ್ಯಮಿ ಶಿರಂಗೂರು ಸುಧಾಕರ ಶೆಟ್ಟಿ ಮಾತನಾಡಿದರು. ಅಧ್ಯಕ್ಷತೆಯನ್ನು ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ ವಹಿಸಿದ್ದರು. ಶಿಬಿರದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಉತ್ತಮ ತಂಡ ಪ್ರಶಸ್ತಿ ಯನ್ನು ಅನನ್ಯ ಕೆ. ನೇತೃತ್ವದ ಸ್ಪೂರ್ತಿ ತಂಡ ಪ್ರಥಮ, ಶರದಿ ನೇತೃತ್ವದ ಕೀರ್ತಿ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ರಾಜ್ಯ ಪತ್ರಕರ್ತರ ವೇದಿಕೆಯ ಅಧ್ಯಕ್ಷ ಶೇಖರ ಅಜೆಕಾರು, ಕೃಷ್ಣ ಶೆಟ್ಟಿ ಕಿನ್ನಿಗುಡ್ಡೆ, ಪ್ರೇಮಾ ಕೆ. ಶೆಟ್ಟಿ, ಸುಕನ್ಯ, ಮಲ್ಲಿಕಾ ಉಪಸ್ಥಿತರಿದ್ದರು. ಸಂಗೀತ ಗುರು ಉದಯಶೆಟ್ಟಿ ಮುಟ್ಲಪಾಡಿ ವರದಿ ವಾಚಿಸಿದರು. ಶಿಕ್ಷಕಿ ಪೂರ್ಣಿಮಾ ಶೆಟ್ಟಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಅಕಾಡಮಿ ಅಧ್ಯಕ್ಷ ಹೆಬ್ರಿ ಉದಯಕುಮಾರ್ ಶೆಟ್ಟಿ ಸ್ವಾಗತಿಸಿ, ಆರತಿ ಶೆಟ್ಟಿ ವಂದಿಸಿದರು. ದೀಪಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನೃತ್ಯ ವೈವಿಧ್ಯ ಹಾಗೂ ಸಂಗೀತ ರಸ ಮಂಜರಿ ನಡೆಯಿತು.







