ಬೆಂಗಳೂರು: ಬಿಜೆಪಿ ನಡೆ ಖಂಡಿಸಿ ಎಸ್‌ಯುಸಿಐ(ಸಿ) ಕಾರ್ಯಕರ್ತರಿಂದ ಪ್ರತಿಭಟನೆ

ಬೆಂಗಳೂರು, ಮೇ 18: ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದಿದ್ದರೂ, ಹಿಂಬಾಗಿಲಿನಿಂದ ಸರಕಾರ ರಚನೆ ಮಾಡಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾರೆ ಎಂದು ಆರೋಪಿಸಿ ಎಸ್‌ಯುಸಿಐ(ಸಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶುಕ್ರವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ದೂರಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಕೆ.ರಾಧಾಕೃಷ್ಣ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಂದಿಲ್ಲ. ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸಂಖ್ಯಾಬಲದೊಂದಿಗೆ ಸರಕಾರ ರಚನೆಗೆ ಮುಂದಾದರೂ, ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು, ಬಿಜೆಪಿ ಪಕ್ಷಕ್ಕೆ ಅವಕಾಶ ನೀಡಿರುವುದು ಖಂಡನೀಯ ಎಂದು ಹೇಳಿದರು.
ಈ ಹಿಂದೆ ಗೋವಾ, ಮಣಿಪುರ, ಮೇಘಾಲಯದಲ್ಲಿನ ಕಾಂಗ್ರೆಸ್ ಪಕ್ಷಗಳ ಸಂಖ್ಯಾಬಲ ಹೆಚ್ಚಾಗಿದ್ದರೂ, ಬಿಜೆಪಿ ಹಾಗೂ ಅನ್ಯ ಪಕ್ಷಗಳಿಗೆ ಸರಕಾರ ರಚನೆಗೆ ಅನುವು ಮಾಡಿಕೊಡಲಾಗಿದೆ. ಆದರೆ, ಕರ್ನಾಟಕ ರಾಜಕಾರಣದಲ್ಲಿ ರಾಜ್ಯಪಾಲರು ಬೇರೆಯೇ ರೀತಿಯಲ್ಲಿ ವರ್ತಿಸಿದ್ದಾರೆಂದು ಆರೋಪಿಸಿದರು.
ಹಿಂಬಾಗಿಲಿನಿಂದ ಪ್ರವೇಶಿಸಿ ಅಧಿಕಾರವನ್ನು ವಶಪಡಿಸಿಕೊಂಡಿರುವ ಬಿಜೆಪಿ ಕೇಂದ್ರ ಸರಕಾರ ತನ್ನ ಫ್ಯಾಶಿಸ್ಟ್ ಧೋರಣೆ ಕೈಬಿಡಬೇಕು. ಜೊತೆಗೆ ಕರ್ನಾಟಕದಲ್ಲಿ ಸಂಖ್ಯಾಬಲ ಹೊಂದಿರುವ ಪಕ್ಷಗಳಿಗೆ ಅವಕಾಶ ನೀಡಬೇಕೆಂದು ಒತ್ತಾಯ ಮಾಡಿದರು. ಪ್ರತಿಭಟನೆಯಲ್ಲಿ ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ವಿ. ಜ್ಞಾನಮೂರ್ತಿ, ಐಶ್ವರ್ಯ ಸೇರಿ ಪ್ರಮುಖರಿದ್ದರು.







