ನೂರಕ್ಕೆ ನೂರು ಬಹುಮತ ಸಾಬೀತು: ಯಡಿಯೂರಪ್ಪ ವಿಶ್ವಾಸ

ಬೆಂಗಳೂರು, ಮೇ 18: ಸುಪ್ರೀಂ ಕೋರ್ಟ್ ಆದೇಶದಂತೆ ನಾಳೆ(ಮೇ 19) ನೂರಕ್ಕೆ ನೂರು ಬಹುಮತ ಸಾಬೀತುಪಡಿಸುತ್ತೇನೆಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಬೇಕು. ಪಕ್ಷದ ಶಾಸಕರೆಲ್ಲರೂ ಅವರವರ ಕ್ಷೇತ್ರಕ್ಕೆ ತೆರಳಿದ್ದು, ಶುಕ್ರವಾರ ಸಂಜೆ ಒಳಗೆ ಬಿಜೆಪಿ ಕಚೇರಿಗೆ ಆಗಮಿಸಲು ನಿರ್ದೇಶನ ನೀಡಲಾಗಿದೆ ಎಂದರು.
ಸುಪ್ರೀಂ ಕೋರ್ಟ್‌ನ ಆದೇಶದಂತೆ ನಾಳೆ(ಮೇ 18) 11ಗಂಟೆಗೆ ವಿಧಾನ ಮಂಡಲ ಅಧಿವೇಶನ ಕರೆಯಬೇಕೆಂದು ಕೋರಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಈಗಾಗಲೇ ಕಡತ ರವಾನೆ ಮಾಡಲಾಗಿದೆ ಎಂದು ಯಡಿಯೂರಪ್ಪ ಇದೇ ವೇಳೆ ತಿಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿ ಬಹುಮತ ಪಡೆದಿದೆ ಎಂದು ರಾಜ್ಯಪಾಲರ ಒಪ್ಪಿಗೆ ಮೇರೆಗೆ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.







