ಮಗ ಮುಖ್ಯಮಂತ್ರಿಯಾದರೆ ಸಂತೋಷವೂ ಆಗದು, ದುಃಖವೂ ಆಗದು: ದೇವೇಗೌಡ

ಬೆಂಗಳೂರು, ಮೇ 18: ಮುಖ್ಯಮಂತ್ರಿ ಯಡಿಯೂರಪ್ಪ ಮೇ 19 ರಂದು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಪ್ರಕ್ರಿಯೆ ಬಗ್ಗೆ ನಾನೂ ಉತ್ಸುಕನಾಗಿದ್ದೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಶುಕ್ರವಾರ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ನಾಳೆಯ ಬೆಳವಣಿಗೆ ಏನಾಗುತ್ತದೆ ಅನ್ನೋದರ ಮೇಲೆ, ನಮ್ಮ ಪಕ್ಷದ ಮುಂದಿನ ನಿಲುವು ನಿರ್ಧಾರವಾಗಲಿದೆ ಎಂದರು.
ಜೆಡಿಎಸ್ ರಾಜ್ಯದಲ್ಲಿ ಈವರೆಗೂ ಪೂರ್ಣ ಬಹುಮತದಿಂದ ಸರಕಾರ ರಚಿಸಿಯೇ ಇಲ್ಲ. 1994ರಲ್ಲಿ ಒಮ್ಮೆ 113 ಸ್ಥಾನಗಳನ್ನು ಗಳಿಸಿದರೂ ಪಕ್ಷದಲ್ಲಿನ ಆಂತರಿಕ ಜಗಳದಿಂದ ಸರಕಾರ ರಚನೆ ಮಾಡಲು ಸಾಧ್ಯವಾಗಿರಲಿಲ್ಲ ಎಂಬ ಬೇಸರವಿದೆ ಎಂದು ದೇವೇಗೌಡ ಖೇದ ವ್ಯಕ್ತಪಡಿಸಿದರು.
ನನ್ನ ಮಗ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ನನಗೆ ಸಂತೋಷವೂ ಆಗುವುದಿಲ್ಲ. ದುಃಖವೂ ಆಗುವುದಿಲ್ಲ. ನಾನು ಸ್ಥಿತಪ್ರಜ್ಞನಾಗಿರುತ್ತೇನೆ ಎಂದ ಅವರು, ವಿಶ್ವಾಸ ಮತಯಾಚನೆ ಬಳಿಕ ಮುಂದಿನ ನಡೆಯ ಬಗ್ಗೆ ತೀರ್ಮಾನಿಸಲಾಗುವುದು ಎಂದರು.





