ಜೆಡಿಎಸ್ ಬಂಡಾಯ ಶಾಸಕರನ್ನು ನಾಳೆ ಬೋಪಯ್ಯ ಅನರ್ಹಗೊಳಿಸಲಿದ್ದಾರೆಯೇ ?
ಇಲ್ಲಿದೆ ಸರಿಯಾದ ಉತ್ತರ

ಬೆಂಗಳೂರು, ಮೇ 18: ಶನಿವಾರ ವಿಶ್ವಾಸಮತ ಯಾಚನೆಗೆ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿಯ ಕೆ.ಜಿ. ಬೋಪಯ್ಯ ಅವರನ್ನು ಆಯ್ಕೆ ಮಾಡಿರುವ ಬೆನ್ನಿಗೆ ಹಲವು ಊಹಾಪೋಹಗಳು ಹರಡತೊಡಗಿವೆ. ಹೇಗಾದರೂ ವಿಶ್ವಾಸಮತ ಗೆಲ್ಲಲು ಪಣತೊಟ್ಟಿರುವ ಬಿಜೆಪಿ ತನಗೆ ಬೆಂಬಲ ನೀಡದ ಕೆಲವಾದರೂ ಕಾಂಗ್ರೆಸ್-ಜೆಡಿಎಸ್ ಶಾಸಕರು ಮತ ಚಲಾಯಿಸದಂತೆ ಬೋಪಯ್ಯರ ಮೂಲಕ ಪ್ರಯತ್ನಿಸಲಿದೆ ಎನ್ನುವ ವ್ಯಾಪಕ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಇದರ ಜೊತೆಗೆ ಬೋಪಯ್ಯ ಕಾಂಗ್ರೆಸ್ ಜೆಡಿಎಸ್ ನ ಕೆಲವು ಶಾಸಕರನ್ನು ಯಾವುದಾದರೂ ನೆಪದಲ್ಲಿ ಅನರ್ಹಗೊಳಿಸಬಹುದು ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿ. ನಿರ್ಗಮನ ವಿಧಾನಸಭೆಯಲ್ಲಿ ಜೆಡಿಎಸ್ ನಿಂದ ಕಾಂಗ್ರೆಸ್ ಸೇರಿದ ಏಳು ಶಾಸಕರ ಅನರ್ಹತೆ ಕೋರಿ ಜೆಡಿಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮೇ 27ರ ಒಳಗಾಗಿ ವಿಷಯವನ್ನು ಇತ್ಯರ್ಥಗೊಳಿಸಿ ಎಂದು ನಿರ್ಗಮನ ಸ್ಪೀಕರ್ ಕೋಳಿವಾಡ ಅವರಿಗೆ ಸೂಚಿಸಿತ್ತು.
ಆ ಏಳು ಮಂದಿ ಪೈಕಿ ಮೂರು ಮಂದಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಲ್ಲಿ ಗೆದ್ದಿದ್ದಾರೆ. ಅವರನ್ನು ಹಂಗಾಮಿ ಸ್ಪೀಕರ್ ಬೋಪಯ್ಯ ಅನರ್ಹಗೊಳಿಸಬಹುದು ಎಂಬ ವದಂತಿಗಳು ಹರಡುತ್ತಿವೆ.
ಆದರೆ ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ಹಂಗಾಮಿ ಸ್ಪೀಕರ್ ಗೆ ಅವಕಾಶವೇ ಇಲ್ಲ. ಇಂದು ಮದ್ಯರಾತ್ರಿಯವರೆಗೂ ಕೆ.ಬಿ. ಕೋಳಿವಾಡರೇ ಸ್ಪೀಕರ್ ಆಗಿದ್ದಾರೆ. ಅವರು ಹಾಲಿ ಜೆಡಿಎಸ್ ಬಂಡಾಯ ಶಾಸಕರನ್ನು ಅನರ್ಹಗೊಳಿಸಬೇಕು ಎಂಬ ಜೆಡಿಎಸ್ ಅರ್ಜಿಯನ್ನು ಶುಕ್ರವಾರ ಬೆಳಗ್ಗೆ ವಜಾ ಮಾಡಿದ್ದಾರೆ.
ಕೆ.ಜಿ. ಬೋಪಯ್ಯರನ್ನು ಹಂಗಾಮಿ ಸ್ಪೀಕರ್ ಆಗಿ ರಾಜ್ಯಪಾಲರು ನೇಮಕ ಮಾಡಿರುವುದು ವಿಶ್ವಾಸಮತ ಸಾಬೀತು ಮಾಡುವ ನಾಳೆಯ ಅಧಿವೇಶನಕ್ಕೆ ಮಾತ್ರ. ಸುಪ್ರೀಂ ಕೋರ್ಟ್ ಆದೇಶದ ಜಾರಿಗಾಗಿ ಈ ನೇಮಕ ನಡೆದಿದೆ. ಅವರ ಅಧಿಕಾರ ಅವಧಿ ಪ್ರಾರಂಭವಾಗುವುದು ಇಂದು ರಾತ್ರಿ 12 ರ ನಂತರ. ಸ್ಪೀಕರ್ ಕೆ.ಬಿ. ಕೋಳಿವಾಡರು ಜೆಡಿಎಸ್ ಅರ್ಜಿಯ ಅಂತಿಮ ವಿಚಾರಣೆಯನ್ನು ಇಂದು ನಡೆಸಿ ಬಂಡಾಯ ಏಳು ಜನ ಶಾಸಕರೂ ನಿರಪರಾಧಿಗಳು ಎಂದು ಘೊಷಿಸಿ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ. ಇಲ್ಲದಿದ್ದರೆ ಅನರ್ಹ ಮಾಡುವ ಅವಕಾಶ ಹೊಸ ಸ್ಪೀಕರ್ ಗೆ ಇತ್ತು.
14ನೇ ವಿಧಾನಸಭೆಯ ಅವಧಿ ಮೇ 26ರವರೆಗೆ ಇತ್ತು. ಮೇ 27 ರ ಒಳಗಾಗಿ ಶಾಸಕರ ಅನರ್ಹ ವಿಚಾರದ ಪ್ರಕರಣವನ್ನು ಇತ್ಯರ್ಥಗೊಳಿಸಿ ಎಂದು ಹೈಕೋರ್ಟ್ ಹೇಳಿತ್ತು. ಅದೇ ಆಧಾರದಲ್ಲಿ ಬೋಪಯ್ಯ ಅನರ್ಹತೆ ಅಸ್ತ್ರ ಬಳಸಬಹುದಿತ್ತು. ಆದರೆ 14 ನೇ ವಿಧಾನಸಭೆಯ ಸ್ಪೀಕರ್ ಕೆ.ಬಿ. ಕೋಳಿವಾಡ ಇಂದು ಬೆಳಿಗ್ಗೆ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಜೆಡಿಎಸ್ ವಿರುದ್ಧದ ಈ ಅಸ್ತ್ರ ಬಿಜೆಪಿ ಬಳಸಲು ಸಾಧ್ಯವಾಗುವುದಿಲ್ಲ.







