"ಎರಡು ಕೋಟಿ ನೀಡಿದರೆ ಇವಿಎಂ ಹ್ಯಾಕ್ ಮಾಡುವುದಾಗಿ ಕರೆ ಬಂದಿತ್ತು"
ತರೀಕೆರೆ ಪರಾಜಿತ ಜೆಡಿಎಸ್ ಅಭ್ಯರ್ಥಿ ಶಿವಶಂಕರಪ್ಪ ಗಂಭೀರ ಆರೋಪ

ತರೀಕೆರೆ, ಮೇ 18: ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯವರು ತಮ್ಮ ಮೋಸದ ಕೃತ್ಯವನ್ನು ಪ್ರದರ್ಶಿಸಿ ರಾಜ್ಯಾದ್ಯಂತ ಪ್ರಜಾತಂತ್ರ ವ್ಯವಸ್ಥೆಗೆ ಮೋಸ ಮಾಡಿದಂತೆ, ತರೀಕೆರೆಯಲ್ಲೂ ಇ.ವಿ.ಎಂ ಮತಯಂತ್ರಗಳ ದುರ್ಬಳಕೆಯಿಂದ ಬಿಜೆಪಿ ಗೆಲುವು ಸಾಧಿಸಿದೆಯೆಂದು ತರೀಕೆರೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಟಿ.ಹೆಚ್ ಶಿವಶಂಕರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.
ಶುಕ್ರವಾರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇವಿಎಂ ಹ್ಯಾಕ್ ಮಾಡಿದ ಆರೋಪ ಸಂಬಂಧ ಮೈಸೂರಿನಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳ ಪೈಕಿ ವೆಂಕಟೇಶ್ ಎಂಬಾತನಿಂದ 'ಮತಯಂತ್ರ ಹ್ಯಾಕ್ ಮಾಡಿ ಅಧಿಕ ಮತ ಬರುವಂತೆ ಮಾಡುತ್ತೇವೆ. ಇದಕ್ಕಾಗಿ ಎರಡು ಕೋಟಿ ರೂಪಾಯಿ ನೀಡಬೇಕು' ಎಂಬ ಆಹ್ವಾನ ಬಂದಿತ್ತು ಎಂದು ಆರೋಪಿಸಿದರು.
'ಈ ಆಹ್ವಾನವನ್ನು ತಾನು ನಯವಾಗಿ ತಿರಸ್ಕರಿಸಿದ್ದೆ. ಇದರಿಂದಾಗಿ ಬಿಜೆಪಿಯವರು ಅದರ ಲಾಭ ಪಡೆದಿದ್ದಾರೆಂಬ ಶಂಕೆ ನನಗಿದೆ. ಮತದಾನದ ಸಮಯದಲ್ಲಿ 100 ಅಡಿ ವ್ಯಾಪ್ತಿಯಲ್ಲಿ ಮೆಮೊರಿ ಕಾರ್ಡ್ ಬಳಸಿ ಇವಿಎಂ ದುರ್ಬಳಕೆ ಮಾಡಲಾಗಿದೆ. ಈ ಇವಿಎಂ ಮತಯಂತ್ರಗಳ ಜೋಡಣೆಯಿಂದ ಉಡೇವಾ, ತಣಿಗೇಬೈಲು, ಶಾಂತವೇರಿ, ಕೋಡಿಕ್ಯಾಂಪ್ ಹಾಗೂ ತರೀಕೆರೆಯ ಸುತ್ತಮುತ್ತಲ ಊರುಗಳಾದ ಕೆಂಚಾಪುರ, ಚೌಡೇಶ್ವರಿ ಕಾಲೋನಿ, ಅತ್ತಿಗನಾಳು ಭಾಗದ ಜೆಡಿಎಸ್, ಕಾಂಗ್ರೆಸ್ ಮತಗಳು ಬಿಜೆಪಿಗೆ ಹೋಗಿವೆ ಎಂದು ಗಂಭೀರವಾಗಿ ಆರೋಪಿಸಿದ ಅವರು, ಭವಿಷ್ಯದಲ್ಲಿ ಭಾರತೀಯ ಜನತಾ ಪಾರ್ಟಿಯವರು ಇದನ್ನು ನಿರಂತರವಾಗಿ ಪಡೆದುಕೊಂಡು ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂದರು.
ಈ ಚುನಾವಣೆಯಲ್ಲಿ ಬಿಜೆಪಿಯವರು 18 ರಿಂದ 20 ಸಾವಿರ ಮತ ಪಡೆಯಲು ಶಕ್ತರಿದ್ದರು. ಜೆಡಿಎಸ್ 35 ಸಾವಿರ, ಕಾಂಗ್ರೆಸ್ 30 ಸಾವಿರ ಹಾಗೂ ಪಕ್ಷೇತರ ಅಭ್ಯರ್ಥಿ ಗೋಪಿ 25 ಸಾವಿರ ಮತಪಡೆಯುವ ನಿರೀಕ್ಷೆ ಇದ್ದು, ಬಿಜೆಪಿಯವರ ಮೋಸಕ್ಕೆ ನಾವು ಬಲಿಯಾಗಿದ್ದೇವೆ. ಬಿಜೆಪಿವರು ಕಾಂಗ್ರೆಸ್, ಜೆಡಿಎಸ್‍ನ ಮತಗಳನ್ನು ಕದ್ದಿದ್ದಾರೆಯೇ ಹೊರತು ಸಹಜವಾಗಿ ಮತದಾರರಿಂದ ಅವರಿಗೆ ಬಂದ ಮತಗಳು ಅಲ್ಲ ಎಂದ ಅವರು, ಬಿಜೆಪಿಗೆ ರಾಜ್ಯದಲ್ಲಿ 70 ರಿಂದ 80 ಸ್ಥಾನ ಮಾತ್ರ ಗಳಿಸಲು ಆರ್ಹತೆಯಿತ್ತು. ಮತಯಂತ್ರಗಳ ದುರ್ಬಳಕೆ ಮಾಡಿ 104 ಸೀಟು ಬಂದಿದೆ. ಮುಂದಿನ ಎಂ.ಪಿ ಚುನಾವಣೆಯಲ್ಲಿ ಈ ತಂತ್ರ ನಡೆಯುವುದಿಲ್ಲ. ನಾನು ಸೋತಿರುವ ಬಗ್ಗೆ ಬೇಸರವಿಲ್ಲ ಜನರ ಮಧ್ಯೆ ಇದ್ದು ಕೆಲಸ ಮಾಡುತ್ತೇನೆ. ನನ್ನ ಬಲ ಏನೆಂದು ತೋರಿಸುತ್ತೇನೆಂದು ಹೇಳಿದರು.
ಸಭೆಯಲ್ಲಿ ಮುಖಂಡರಾದ ಗೋವಿಂದಪ್ಪ, ಜಿ.ಟಿ. ರಮೇಶ್ ಹಾಗೂ ಇತರರು ಇದ್ದರು.







