ಉಡುಪಿ: ಬಂದೂಕು ದಾಸ್ತಾನಿಗೆ ಶುಲ್ಕ ಕೈಬಿಡುವಂತೆ ಜಿಲ್ಲಾಧಿಕಾರಿಗೆ ಮನವಿ

ಉಡುಪಿ, ಮೇ 18: ಚುನಾವಣೆ ಸಂದರ್ಭದಲ್ಲಿ ರೈತರ ಬಂದೂಕನ್ನು ಪೋಲಿಸ್ ಠಾಣೆಯಲ್ಲಿ ಠೇವಣಿ ಇರಿಸಬೇಕಾಗಿದ್ದು, ಇದಕ್ಕೆ ಪ್ರತೀ ತಿಂಗಳು 200 ರೂ. ಶುಲ್ಕ ಪಾವತಿಸುವಂತೆ ಜಿಲ್ಲಾಡಳಿತ ಹೊರಡಿಸಿರುವ ಆದೇಶದಿಂದ ರೈತರು ಆತಂಕಿತರಾಗಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿ ಜಿಲ್ಲೆಯ ರೈತರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಅರ್ಪಿಸಿದ ಮನವಿಯಲ್ಲಿ ತಿಳಿಸಿದೆ.
ವರ್ಷಕ್ಕೊಂದರಂತೆ ಬರುವ ಬೇರೆ ಬೇರೆ ಚುನಾವಣೆ ಸಂದರ್ಭಗಳಲ್ಲಿ 4 ರಿಂದ 5 ತಿಂಗಳು ನಮ್ಮ ಬಂದೂಕನ್ನು ಪೋಲಿಸ್ ಠಾಣೆಯಲ್ಲಿ ದಾಸ್ತಾನಿರಿಸ ಬೇಕು. ಇದಕ್ಕೆ ತಿಂಗಳಿಗೆ 200ರೂ.ನಂತೆ ಶುಲ್ಕದಂತೆ ರೈತರು ಪ್ರತಿ ಚುನಾವಣೆ ಸಮಯದಲ್ಲಿ 800ರಿಂದ 1000 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಇದು ರೈತರ ಪಾಲಿಗೆ ಹೆಚ್ಚುವರಿ ಹೊರೆಯಾಗಿದೆ. ಆದ್ದರಿಂದ ಈ ಶುಲ್ಕವನ್ನು ಕೂಡಲೇ ಕೈಬಿಟ್ಟು ಆದೇಶ ಹೊರಡಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿಗಳಿಗೆ ಭಾಕಿಸಂ ಜಿಲ್ಲಾಧ್ಯಕ ಬಿ.ವಿ ಪೂಜಾರಿ ನೇತೃತ್ವದಲ್ಲಿ ನಿಯೋಗ ಮನವಿ ಮಾಡಿತು.
ಬೇಸಿಗೆ ತಿಂಗಳಲ್ಲಿ ಕಾಡಿನಲ್ಲಿ ನೀರು, ಹುಲ್ಲು ಹಾಗೂ ಹಣ್ಣು ಹಂಪಲುಗಳ ಕೊರತೆಯಿಂದ ಕಾಡುಪ್ರಾಣಿಗಳು ಕೃಷಿ ಕ್ಷೇತ್ರಕ್ಕೆ ಲಗ್ಗೆಯಿಟ್ಟು, ರೈತ ಬೆಳೆದ ಬೆಳೆಗಳನ್ನೆಲ್ಲಾ ತಿಂದು ನಾಶ ಮಾಡುತ್ತವೆ. ಚುನಾವಣೆಯ ಕಾರಣಕ್ಕೆ ಬಂದೂಕನ್ನು ಠೇವಣಿ ಇಡುವುದರಿಂದ ಒಂದೆಡೆ ರೈತನಿಗೆ ಬೆಳೆ ನಷ್ಟವಾಗಿ ಸಾಕಷ್ಟು ಆರ್ಥಿಕ ಹೊಡೆತವಾದರೆ ಇನ್ನೊಂದೆಡೆ ಜಿಲ್ಲಾಡಳಿತ ಹೊರಡಿಸಿದ ಆದೇಶದಿಂದ ಶುಲ್ಕ ಪಾವತಿಸಬೇಕಾಗಿದೆ. ಅದರ ಬದಲು ಜಿಲ್ಲಾಡಳಿತವೇ ರೈತರ ಬೆಳೆ ಕಾಯ್ದು ಕೊಟ್ಟರೆ ನಮಗೆ ಯಾವುದೇ ಬಂದೂಕಿನ ಅಗತ್ಯವಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬೇಸಿಗೆ ತಿಂಗಳಲ್ಲಿ ಕಾಡಿನಲ್ಲಿ ನೀರು, ಹುಲ್ಲು ಹಾಗೂ ಹಣ್ಣು ಹಂಪಲುಗಳ ಕೊರತೆಯಿಂದ ಕಾಡುಪ್ರಾಣಿಗಳು ಕೃಷಿ ಕ್ಷೇತ್ರಕ್ಕೆ ಲಗ್ಗೆಯಿಟ್ಟು, ರೈತ ಬೆಳೆದ ಬೆಳೆಗಳನ್ನೆಲ್ಲಾ ತಿಂದು ನಾಶ ಮಾಡುತ್ತವೆ. ಚುನಾವಣೆಯ ಕಾರಣಕ್ಕೆ ಬಂದೂಕನ್ನು ಠೇವಣಿ ಇಡುವುದರಿಂದ ಒಂದೆಡೆ ರೈತನಿಗೆ ಬೆಳೆ ನಷ್ಟವಾಗಿ ಸಾಕಷ್ಟು ಆರ್ಥಿಕ ಹೊಡೆತವಾದರೆ ಇನ್ನೊಂದೆಡೆ ಜಿಲ್ಲಾಡಳಿತ ಹೊರಡಿಸಿದ ಆದೇಶದಿಂದ ಶುಲ್ಕ ಪಾವತಿಸಬೇಕಾಗಿದೆ. ಅದರ ಬದಲು ಜಿಲ್ಲಾಡಳಿತವೇ ರೈತರ ಬೆಳೆ ಕಾಯ್ದು ಕೊಟ್ಟರೆ ನಮಗೆ ಯಾವುದೇ ಬಂದೂಕಿನ ಅಗತ್ಯವಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ನಿಯೋಗದಲ್ಲಿ ಮಾತನಾಡಿದ ಭಾಕಿಸಂ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಜಿಲ್ಲೆಯಲ್ಲಿ ಸುಮಾರು 4000ಕ್ಕೂ ಹೆಚ್ಚು ಪರವಾನಿಗೆ ಹೊಂದಿದ ರೈತರ ಬಂದೂಕುಗಳಿವೆ. ಇದರಿಂದ ಪೋಲಿಸ್ ಇಲಾಖೆಗೆ ಜಿಲ್ಲೆಯೊಂದರಿಂದಲೇ ರೈತರಿಂದ 40 ಲಕ್ಷ ರೂ.ಗಳಿಗೂ ಅಧಿಕ ಹಣ ಸಂಗ್ರಹವಾಗುತ್ತದೆ. ಇದಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಹಿಂದೆ ಯಾವುದೇ ಶುಲ್ಕ ವಿಧಿಸುವ ಕ್ರಮ ಇರಲಿಲ್ಲ. 2016ರಲ್ಲಾದ ತಿದ್ದುಪಡಿ ಸಂದರ್ಭದಲ್ಲಿ ಅಗತ್ಯವಿದ್ದರೆ ಬಂದೂಕು ಠೇವಣಿ ಬಗ್ಗೆ ತಿಂಗಳಿಗೆ 200 ರೂ. ಶುಲ್ಕ ವಿಧಿಸ ಬಹುದು ಎಂದಿದೆಯೇ ಹೊರತು, ವಿಧಿಸಲೇಬೇಕೆಂದಿಲ್ಲ. ಅಲ್ಲದೆ ಈ ಕಾನೂನಿನ ತಿದ್ದುಪಡಿ ಮಾಡಿರುವ ಕ್ರಮ ಕೂಡ ಆಕ್ಷೇಪಣೀಯ. ಬೇರೆ ಪಿಸ್ತೂಲು ಮತ್ತು ಆತ್ಮರಕ್ಷಕ ಗನ್‌ಗಳಿಗೆ ವಿಧಿಸುವಂತೆ ರೈತರ ಬಂದೂಕುಗಳಿಗೆ ಶುಲ್ಕ ವಿಧಿಸುವುದು ಸರಿಯಲ್ಲ. ಇದನ್ನು ಕೈ ಬಿಡುವಂತೆ ಮುಂದಿನ ದಿನದಲ್ಲಿ ಕಾನೂನಾತ್ಮಕ ಹೋರಾಟವನ್ನು ಸಂಘ ಮಾಡಲಿದೆ ಎಂದು ತಿಳಿಸಿದರು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಈ ಬಗ್ಗೆ ತಜ್ಞರ ಅಭಿಪ್ರಾಯ ಹಾಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ತೆಗೆದುಕೊಂಡಿರುವ ಕ್ರಮಗಳನ್ನು ತಿಳಿದು ಶೀಘ್ರದಲ್ಲಿ ಆದೇಶ ಹೊರಡಿಸುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.
ಆ ಕಾರಣಕ್ಕೆ ರೈತರು ಶುಲ್ಕವನ್ನು ಪಾವತಿಸದಂತೆ ಸಂಘ ಕರೆಕೊಟ್ಟಿದ್ದು, ಜಿಲ್ಲಾಧಿಕಾರಿ ಕ್ರಮದ ನಂತರ ಮುಂದಿನ ತೀರ್ಮಾನ ಕೈಗೊಳ್ಳುವ ಬಗ್ಗೆ ತಿಳಿಸಿದೆ. ಭಾಕಿಸಂ ನಿಯೋಗದಲ್ಲಿ ಪ್ರಮುಖರಾದ ವಾಸುದೇವ ಶ್ಯಾನುಬಾಗ್, ಗೋವಿಂದರಾಜ್ ಭಟ್, ಪಾಂಡುರಂಗ ಹೆಗ್ಡೆ, ಶಂಕರನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.







