‘ಬೇಸಿಗೆ ಶಿಬಿರಗಳಿಂದ ಮಕ್ಕಳ ಪ್ರತಿಭೆ ಅರಳಲು ಅವಕಾಶ’

ಉಡುಪಿ, ಮೇ 18: ಬೇಸಿಗೆ ಶಿಬಿರಗಳಿಂದ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹೊರಬರಲು ಅವಕಾಶ ದೊರೆಯಲಿದ್ದು, ಇದರಿಂದ ಹೊಸ ಪ್ರತಿಭೆಗಳು ಉದಯವಾಗಲು ಸಾಧ್ಯವಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಹೇಳಿದ್ದಾರೆ.
ಶುಕ್ರವಾರ ಉಡುಪಿ ಜಿಲ್ಲಾ ಬಾಲಭವನದಲ್ಲಿ, ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಬಾಲಭವನ ಸಮಿತಿ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಮೇ 3ರಿಂದ 18ರವರೆಗೆ ಏರ್ಪಡಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂದ ಅಧ್ಯಕ್ಷತೆ ಹಿಸಿ ಅವರು ಮಾತನಾಡುತಿದ್ದರು.
ಶೈಕ್ಷಣಿಕ ವರ್ಷದ ಆರಂಭದಿಂದ ಶಾಲೆ, ಪಾಠ ಇವುಗಳಲ್ಲೇ ಮುಳುಗಿ ಏಕತಾನತೆಯಿಂದ ಇರುವ ಮಕ್ಕಳಲ್ಲಿ, ಅವರಲ್ಲಿ ಸುಪ್ತವಾಗಿರುವ ಪ್ರತಿಭೆಗಳು ಹೊರಬರಲು ಬೇಸಿಗೆ ಶಿಬಿರಗಳು ಸಹಾಯಕಾರಿ. ಬೇಸಿಗೆ ಶಿಬಿರದಲ್ಲಿ ಕಲಿಯುವ ಚಟುವಟಿಕೆಗಳನ್ನು ಮಕ್ಕಳು ಮರೆಯದೇ ನಿರಂತರವಾಗಿ ಅಭ್ಯಾಸ ಮಾಡಬೇಕು ಎಂದು ಗ್ರೇಸಿ ಗೊನ್ಸಾಲ್ವಿಸ್ ಹೇಳಿದರು.
ಬಾಲಭವನದಲ್ಲಿ ನಡೆದ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಚಿತ್ರಕಲೆ, ಕ್ರಾಪ್ಟ್, ಯೋಗ, ಕರಾಟೆ, ಸಂಗೀತದ ಕುರಿತು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ದಲ್ಲಿ ಉಡುಪಿ ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ವೀಣಾ, ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಸಂಗೀತ ಶಿಕ್ಷಕಿ ಹೇಮಲತಾ, ನೃತ್ಯ ಶಿಕ್ಷಕಿ ರಕ್ಷಾ, ಕರಾಟೆ ಶಿಕ್ಷಕ ಪ್ರವೀಣ್, ಯೋಗ ಶಿಕ್ಷಕ ಪೃಥ್ವಿ ಉಪಸ್ಥಿತರಿದ್ದರು. ಶಿಬಿರದ ಮಕ್ಕಳಾದ ಅಬ್ದುಲ್ಲಾ ಮತ್ತು ದೃತಿಜ ನಿರೂಪಿಸಿದರು. ಬಾಲ ಭವನದ ಸದಾನಂದ ಅಡಿಗ ಸಹಕರಿಸಿದರು. ಇದೇ ಸಂದರ್ಭದಲ್ಲಿ ಬಾಲಭವನ ಸೊಸೈಟಿ ಬೆಂಗಳೂರು ವತಿಯಿಂದ ಏರ್ಪಡಿಸಿದ್ದ ಅಭಿರಂಗ ನಾಟಕೋತ್ಸವದ ಅಂಗವಾಗಿ ‘ತಾಯಿಯ ಮಹಿಮೆ’ ಮತ್ತು ‘ಮರದ ತಾಯಿ’ ನಾಟಕಗಳನ್ನು ಮಕ್ಕಳು ಪ್ರದರ್ಶಿಸಿದರು.







