ಮಸೀದಿಗೆ ಹೋಗುತ್ತಿದ್ದ ರಿಕ್ಷಾ ಚಾಲಕನಿಗೆ ಹಲ್ಲೆ: ದೂರು

ಮಂಗಳೂರು, ಮೇ 18: ರಿಕ್ಷಾ ಪಾರ್ಕ್ ಮಾಡಿ ಶುಕ್ರವಾರದ ನಮಾಝಿಗಾಗಿ ಮಸೀದಿಗೆ ಹೋಗುತ್ತಿದ್ದ ರಿಕ್ಷಾ ಚಾಲಕನೋರ್ವನನ್ನು ಉತ್ತರ ಪ್ರದೇಶ ನೋಂದಣಿಯ ಬಸ್ಸಿನ ಮೂವರು ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಜಪ್ಪು ನಿವಾಸಿ ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಶಿಹಾಬುದ್ದೀನ್ (28) ಹಲ್ಲೆಗೆ ಒಳಗಾದವರು ಎಂದು ಗುರುತಿಸಲಾಗಿದೆ. ಹಲ್ಲೆಯಿಂದ ಗಾಯ ಗೊಂಡಿರುವ ಶಿಹಾಬುದ್ದೀನ್ ನಗರದ ವೆನ್ಲಾಕ್‌ಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಹಂಪನಕಟ್ಟದ ಮಸೀದಿ ಬಳಿಯ ರೈಲ್ವೆ ಸ್ಟೇಶನ್ ರಿಕ್ಷಾ ನಿಲ್ದಾಣದಲ್ಲಿ ತನ್ನ ರಿಕ್ಷಾವನ್ನು ಪಾರ್ಕ್ ಮಾಡಿ ಮಧ್ಯಾಹ್ನ ಸುಮಾರು 1 ಗಂಟೆಗೆ ಶುಕ್ರವಾರದ ನಮಾಝಿಗೆಂದು ಮಸೀದಿಗೆ ಹೋಗುತ್ತಿದ್ದೆ. ಈ ಸಂದರ್ಭ ಉತ್ತರ ಪ್ರದೇಶ ನೋಂದಣಿಯ (ಯು.ಪಿ. 75 ಎಟಿ 4236) ಬಸ್ಸೊಂದು ರಸ್ತೆ ಮಧ್ಯದಲ್ಲಿ ನಿಂತಿದ್ದರಿಂದ ಅದರ ಚಾಲಕನನ್ನು ಸ್ವಲ್ಪ ಬದಿಗೆ ನಿಲ್ಲಿಸುವಂತೆ ಮನವಿ ಮಾಡಿದ್ದೆ. ಕೂಡಲೇ ಬಸ್ಸಿನಲ್ಲಿದ್ದ ಚಾಲಕ, ಕಂಡಕ್ಟರ್ ಹಾಗೂ ಕ್ಲೀನರ್ ಸೇರಿ ಹಲ್ಲೆ ಮಾಡಿ ಬಳಿಕ ಬಸ್ಸಿನೊಳಗೆ ಎಳೆದೊಯ್ದು ಇಬ್ಬರು ಕೈಯನ್ನು ಹಿಂಬದಿಗೆ ಗಟ್ಟಿಯಾಗಿ ಎಳೆದುಕೊಂಡಿದ್ದರೆ, ಮತ್ತೊಬ್ಬ ರಾಡ್‌ನಿಂದ ಬಲವಾಗಿ ಹೊಡೆದಿದ್ದಾನೆ. ಬಸ್ಸಿನ ಚಾಲಕ ಹಿಂದಿಯಲ್ಲಿ ಮಾತನಾಡುತ್ತಾ ಊಪರ್ ಕಾ ಸಾಮಾನ್ ಲೇ ಕೆ ಉಸ್ ಕು ಕಾಟ್‌ದೆ (ಮೇಲಿನ ಸಾಮಾನು ಹೊರ ತೆಗೆದು ಅವನನ್ನು ಕತ್ತರಿಸಿ ಹಾಕು) ಎಂದು ಹೇಳಿದ್ದಾನೆ. ಅವರ ಕೈಯಲ್ಲಿ ಚೂರಿ, ರಾಡ್‌ಗಳಿದ್ದವು. ತನ್ನ ಶಿರವಸ್ತ್ರವನ್ನು ಗಮನಿಸಿ ಜಾತಿ ನಿಂದನೆ ಮಾಡಿ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಶಿಹಾಬುದ್ದೀನ್ ಆರೋಪ ಮಾಡಿದ್ದಾರೆ.
ಘಟನೆಯ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಶಿಹಾಬುದ್ದೀನ್ ಅವರ ಹೆಗಲು, ಮೂಗು, ಎದೆ ಹಾಗೂ ಹೊಟ್ಟೆ ಭಾಗಗಳಿಗೆ ಗಾಯಗಳಾಗಿವೆ.





