ಇವಿಎಂ ಮತಯಂತ್ರ ದುರುಪಯೋಗ ಆರೋಪ: ವೆಂಕಟೇಶ್ ಸೇರಿ ಇತರರ ಬಿಡುಗಡೆ

ಮೈಸೂರು,ಮೇ.18: ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಮತಯಂತ್ರ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದ ವೆಂಕಟೇಶ್ ಸೇರಿದಂತೆ ಇತರರನ್ನು ಬಿಡುಗಡೆಗೊಳಿಸಲಾಗಿದೆ.
ಇವಿಎಂ ಮತಯಂತ್ರ ಹ್ಯಾಕ್ ಮಾಡುವುದು ಅಷ್ಟು ಸುಲಭವಲ್ಲ, ಹಾಗೆಯೇ ವೆಂಕಟೇಶ್ ಮತ್ತು ಇತರರು ಅಷ್ಟೊಂದು ಪರಿಣಿತರಲ್ಲ. ಇದರ ಬಗ್ಗೆ ತಿಳುವಳಿಕೆ ಕೂಡಾ ಇವರಿಗೆ ಇಲ್ಲ. ದಟ್ಟಗಳ್ಳಿಯ ಪ್ರಶಾಂತ್ ಎಂಬ ವ್ಯಕ್ತಿ ನರಸಿಂಹರಾಜ ಕ್ಷೇತ್ರದ ಅಭ್ಯರ್ಥಿಗಳ ಬಳಿ ಈ ವಿಚಾರ ಹೇಳಿ ಹಣ ಪಡೆಯುವಂತೆ ಸೂಚಿಸಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ವೆಂಕಟೇಶ್ ಅವರ ಮನೆಯನ್ನು ಶೋಧ ನಡೆಸಲಾಗಿದ್ದು, ಅಲ್ಲಿ ಇವಿಎಂ ಯಂತ್ರಕ್ಕೆ ಸಂಬಂಧ ಪಟ್ಟ ಯಾವುದೇ ವಸ್ತುಗಳು ಸಿಗಲಿಲ್ಲ ಎಂದು ಎಸಿಪಿ ಗೋಪಾಲ್ ಹೇಳಿದ್ದಾರೆ.
ವೆಂಕಟೇಶ್ ಸೇರಿದಂತೆ ಇತರರನ್ನು ಈಗಾಗಲೇ ಜೆಡಿಎಸ್ ಮುಖಂಡ ಅಬ್ದುಲ್ ಅಝೀಝ್ ಪೊಲೀಸ್ ವಶಕ್ಕೆ ಒಪ್ಪಿಸಿದ್ದರು. 'ನಾವು ವಿಚಾರಣೆ ಮಾಡಿದಾಗ ಆತನ ಪಾತ್ರ ಏನೂ ಇಲ್ಲ ಎಂದು ತಿಳಿದು ಬಂದಿದೆ. ಈತನಿಗೆ ಹೇಳಿದ ದಟ್ಟಗಳ್ಳಿನ ಪ್ರಶಾಂತ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಬಲೆ ಬೀಸಿದ್ದೇವೆ. ವೆಂಕಟೇಶ್ ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಮಾಡಿದ್ದ. ಈತನ ಸಹೋದರ ಕೂಡ ಸಿಪಿಎಂ ಪಕ್ಷದ ಕಾರ್ಯದರ್ಶಿಯಾಗಿ ಕೆಲಸಮಾಡುತ್ತಿದ್ದು, ಇವರ್ಯಾರಿಗೂ ಇಂತಹ ಪರಿಜ್ಞಾನ ಇಲ್ಲ' ಎಂದು ಹೇಳಿದ್ದಾರೆ.
ಇವಿಎಂ ಮತಯಂತ್ರ ಹ್ಯಾಕ್ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿ, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಅಝೀಝ್ ಪೊಲೀಸರಿಗೆ ದೂರು ನೀಡಿದ್ದರು. ವೆಂಕಟೇಶ್ ಮತ್ತು ಪ್ರಶಾಂತ್ ಚುನಾವಣಾ ಪೂರ್ವ ಅಬ್ದುಲ್ ಅಝೀಝ್ ಅವರ ಬಳಿ ಬಂದು ಇವಿಎಂ ಹ್ಯಾಕ್ ಮಾಡುವುದಾಗಿ ಹೇಳಿ ಹಣಕ್ಕೆ ಪೀಡಿಸಿದ್ದರು ಎಂದು ಹೇಳಲಾಗಿದೆ.
ಜೊತೆಗೆ ಎಸ್.ಡಿ.ಪಿ.ಐ ಅಭ್ಯರ್ಥಿ ಅಬ್ದುಲ್ ಮಜೀದ್ ಕೂಡ ಇವಿಎಂ ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಹಾಗೆಯೇ ಬಿಜೆಪಿಯ ಸಂದೇಶ್ ಸ್ವಾಮಿ ಕೂಡ ಅನುಮಾನ ವ್ಯಕ್ತಪಡಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.







