ಪುತ್ತೂರು: ಸಹಕಾರಿ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಬಂಧನ
ಠೇವಣಿ ಹಿಂದಿರುಗಿಸದೆ ಲಕ್ಷಾಂತರ ರೂ. ವಂಚನೆ

ಗಿರೀಶ್ ಕುಮಾರ್ - ಕೇಶವ
ಪುತ್ತೂರು, ಮೇ 18: ಲಕ್ಷಾಂತರ ರೂಪಾಯಿ ಠೇವಣಿ ಪಡೆದು ಗ್ರಾಹಕರಿಗೆ ಹಿಂದಿರುಗಿಸದೆ ವಂಚನೆ ಮಾಡಿದ ಆರೋಪದಲ್ಲಿ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಶರ್ಮಾಹಾನ್ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗಿರೀಶ್ ಕುಮಾರ್ ಮತ್ತು ಕಾರ್ಯದರ್ಶಿ ಕೇಶವ ಎಂಬವರನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಯೆಯ್ಯಾಡಿ ನಿವಾಸಿ ಶ್ರೀಶ ಕೇಶವ ಎಂಬವರು ನೀಡಿದ ದೂರಿನಂತೆ ಸಹಕಾರಿ ಸಂಘದ ಅಧ್ಯಕ್ಷ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಬೇರಿಕೆ ನಿವಾಸಿ ಗಿರೀಶ್ ಮತ್ತು ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಕೇಶವ ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಶ್ರೀಶ ಕೇಶವ ಅವರು 2016ರಿಂದ ಸಂಘದಲ್ಲಿ 79 ಲಕ್ಷ ರೂ. ಠೇವಣಿ ರೂಪದಲ್ಲಿ ಇರಿಸಿದ್ದರು. ಈ ಪೈಕಿ 50 ಲಕ್ಷ ರೂ. ಠೇವಣಿ ಮರುಪಾವತಿ ಅವಧಿ ಮುಗಿದಿದ್ದು, ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಕಚೇರಿಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಈ ಸಂಘವು ಪುತ್ತೂರು ಮಾತ್ರವಲ್ಲದೆ ವಿಟ್ಲ ಮತ್ತು ಬಿ.ಸಿ. ರೋಡ್ನಲ್ಲಿಯೂ ಶಾಖೆಯನ್ನು ಹೊಂದಿದ್ದು, ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ಮತ್ತೆ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.







