ಉಳ್ಳಾಲ: ಹೆದ್ದಾರಿ ಪ್ರಯಾಣಿಕರಿಗೆ ಇಫ್ತಾರ್ ವ್ಯವಸ್ಥೆ

ಮಂಗಳೂರು, ಮೇ 18: ರಾ.ಹೆ.66ರ ಜಪ್ಪಿನಮೊಗರು ಸಮೀಪದ ಉಳ್ಳಾಲ ಸೇತುವೆ ಬಳಿ ಹೆದ್ದಾರಿ ಪ್ರಯಾಣಿಕರಿಗೆ ಇಫ್ತಾರ್ ವ್ಯವಸ್ಥೆಯನ್ನು ಮಂಗಳೂರಿನ ಬ್ಯಾರಿ ಝುಲ್ಫಿ ಬಳಗ ಶುಕ್ರವಾರದಿಂದ ಆಯೋಜಿಸಿದೆ.
ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಹಾದು ಹೋಗುವಾಗ ಜಪ್ಪಿನಮೊಗರು ಎಡಬದಿಯಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕುಡಿಯುವ ನೀರು, ತಂಪು ಪಾನೀಯ, ಸಮೂಸ, ಖರ್ಜೂರ, ಸಿಹಿ ತಿಂಡಿಯನ್ನು ಇಲ್ಲಿ ಜೋಡಿಸಿಡಲಾಗಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
‘ಕಳೆದ 2 ವರ್ಷಗಳಿಂದ ಇಫ್ತಾರ್ ಕೂಟ ಏರ್ಪಡಿಸಿದ ಬಳಿಕ ಉಳಿದ ಆಹಾರವನ್ನು ಸಂಗ್ರಹಿಸಿ ಅನಾಥ ಆಶ್ರಮ, ಆಸ್ಪತ್ರೆಯ ರೋಗಿಗಳ ಸಹಿತ ಅರ್ಹರಿಗೆ ಹಂಚುವ ವ್ಯವಸ್ಥೆ ಮಾಡಿದ್ದೆ. ಈ ಬಾರಿ ಹೆದ್ದಾರಿ ಪಕ್ಕದಲ್ಲೊಂದು ಟೆಂಟ್ ಹಾಕಿ ಇಫ್ತಾರ್ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಿದ್ದೇನೆ. ಗುರುವಾರವೇ ಈ ವ್ಯವಸ್ಥೆ ಮಾಡಬೇಕು ಎಂದು ಬಯಸಿದ್ದೆ. ಆದರೆ, ಸಾಧ್ಯವಾಗಲಿಲ್ಲ. ಹಾಗಾಗಿ ಇಂದಿನಿಂದ (ಶುಕ್ರವಾರ) ಆರಂಭಿಸಿದ್ದೇನೆ. ಸಂಜೆ ಸುಮಾರು 6:30ರಿಂದ 7 ಗಂಟೆಯವರೆಗೆ ಇಲ್ಲಿ ನಾನು ಅಥವಾ ನನ್ನ ಗೆಳೆಯರು ಸೇವೆಯಲ್ಲಿ ನಿರತರಾಗಿರುತ್ತೇವೆ. ಇಫ್ತಾರ್‌ಗಾಗಿ ಮಸೀದಿಯೋ, ಮನೆಗೋ ಮಿತಿಮೀರಿದ ವೇಗದಲ್ಲಿ ಹೋಗುವ ಧಾವಂತದಲ್ಲಿ ಅಪಘಾತಗಳಾಗುವುದು ಸಹಜ. ಅದನ್ನು ತಪ್ಪಿಸುವ ಸಲುವಾಗಿ ಈ ಬಾರಿ ಈ ಕಲ್ಪನೆಯಲ್ಲಿ ವ್ಯವಸ್ಥೆ ಮಾಡಿದ್ದೇನೆ. ಈಗಾಗಲೆ ಹಲವರು ಉದಾರ ನೆರವು ನೀಡುವ ಭರವಸೆ ನೀಡಿದ್ದಾರೆ. ಇಂದು ಸುಮಾರು 65 ಉಪವಾಸಿಗರು ಇದರ ಪ್ರಯೋಜನ ಪಡೆದುಕೊಂಡರು. ಕೆಲವು ಮಂದಿ ಕಾರಿನಲ್ಲಿ ತೆಗೆದುಕೊಂಡು ಹೋದರು. ಇನ್ನು ಕೆಲವರು ಸ್ಥಳದಲ್ಲೇ ಉಪವಾಸ ತೊರೆದರು. ಇನ್ನೂ ಹೆಚ್ಚು ಮಂದಿ ಬಂದರೆ ಅವರಿಗೂ ವ್ಯವಸ್ಥೆ ಕಲ್ಪಿಸುವುದಾಗಿ’ ಬ್ಯಾರಿ ಝುಲ್ಫಿ ತಿಳಿಸಿದ್ದಾರೆ.
ಈ ಸಂದರ್ಭ ಹೋಪ್ ಫೌಂಡೇಶನ್ ಇದರ ಸೈಫ್ ಸುಲ್ತಾನ್, ಬ್ಯಾರಿ ಝುಲ್ಫಿ, ಅಝರ್ ಜೆಪ್ಪು ಉಪಸ್ಥಿತರಿದ್ದರು.





