ನೈಸರ್ಗಿಕ ವಿಕೋಪಗಳನ್ನು ಎದುರಿಸಲು ಹೆಚ್ಚಿನ ಸಿದ್ಧತೆಗೆ ರಾಜ್ಯ ಸರಕಾರಗಳಿಗೆ ಕೇಂದ್ರದ ಸೂಚನೆ
ಹೊಸದಿಲ್ಲಿ,ಮೇ 18: ನೈಸರ್ಗಿಕ ವಿಕೋಪಗಳನ್ನು ಎದುರಿಸಲು ಮತ್ತು ಅವುಗಳಿಂದ ಹಾನಿಯನ್ನು ಕನಿಷ್ಠ ಮಟ್ಟಕ್ಕೆ ತಗ್ಗಿಸಲು ಹೆಚ್ಚಿನ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಕೇಂದ್ರವು ಶುಕ್ರವಾರ ರಾಜ್ಯ ಸರಕಾರಗಳಿಗೆ ಸೂಚಿಸಿದೆ. ನೈಸರ್ಗಿಕ ವಿಕೋಪಗಳಿಗೆ ಪ್ರತಿವರ್ಷ ಸಾವಿರಾರು ಜನರು ಬಲಿಯಾಗುತ್ತಿದ್ದು,ಸರಾಸರಿ 60,000 ಕೋ.ರೂ.ಗಳ ಹಾನಿ ಸಂಭವಿಸುತ್ತಿದೆ.
ರಾಜ್ಯ ಪರಿಹಾರ ಆಯುಕ್ತರು ಮತ್ತು ಕಾರ್ಯದರ್ಶಿಗಳ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ ಗುಬಾ ಅವರು,ವಿವಿಧ ನೈಸರ್ಗಿಕ ವಿಕೋಪಗಳಿಂದಾಗಿ 2005ರಿಂದ 2014ರವರೆಗಿನ ಅವಧಿಯಲ್ಲಿ ದೇಶವು ಪ್ರತಿವರ್ಷ ಸುಮಾರು 60,000 ಕೋ.ರೂ.ಗಳ ಆರ್ಥಿಕ ನಷ್ಟವನ್ನು ಅನುಭವಿಸಿದ್ದು,ಪ್ರವಾಹಗಳಿಂದಾಗಿ ಗರಿಷ್ಠ ಹಾನಿ ಸಂಭವಿಸಿದೆೆ ಎಂದು ತಿಳಿಸಿದರು.
ಪ್ರವಾಹ,ಚಂಡಮಾರುತ,ಭೂಕಂಪ ಇತ್ಯಾದಿಗಳಂತಹ ನೈಸರ್ಗಿಕ ವಿಕೋಪಗಳಿಂದಾಗಿ ಹಾನಿಯನ್ನು ಕನಿಷ್ಠ ಮಟ್ಟಕ್ಕೆ ತಗ್ಗಿಸಲು ಹೆಚ್ಚಿನ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯಸರಕಾರಗಳ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ ಅವರು,ಕಳೆದ ಹಲವಾರು ವರ್ಷಗಳಲ್ಲಿ ನಿರಂತರ ಪ್ರಯತ್ನಗಳ ಮೂಲಕ ನೈಸರ್ಗಿಕ ವಿಕೋಪಗಳಿಂದಾಗಿ ಹಾನಿಯನ್ನು ತಗ್ಗಿಸುವಲ್ಲಿ ನಾವು ಯಶಸ್ವಿಯಾಗಿದ್ದೇವಾದರೂ,ನಮ್ಮ ನಿರ್ವಹಣೆಯನ್ನು ಉತ್ತಮಗೊಳಿಸಲು ಇನ್ನೂ ಅವಕಾಶವಿದೆ ಎಂದರು.
ಕೇಂದ್ರ ಗೃಹ ಸಚಿವಾಲಯದ ನೆರವು ಮುಂದುವರಿಯಲಿದೆ ಎಂದು ರಾಜ್ಯಗಳಿಗೆ ಭರವಸೆ ನೀಡಿದ ಅವರು,ತಮ್ಮ ಸ್ವಂತ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಂತೆ ಮತ್ತು ಕೇಂದ್ರದ ಮೇಲಿನ ಅವಲಂಬನೆಯನ್ನು ಕ್ರಮೇಣ ತಗ್ಗಿಸುವಂತೆ ಆಗ್ರಹಿಸಿದರು.
ನಗರ ಮತ್ತು ಜಿಲ್ಲಾ ಮಟ್ಟಗಳಲ್ಲಿ ಸಾಮರ್ಥ್ಯ ವರ್ಧನೆ ಮತ್ತು ಈ ಕಾರ್ಯದಲ್ಲಿ ಸಮುದಾಯಗಳ ತೊಡಗಿಸಿಕೊಳ್ಳುವಿಕೆಗೆ ಅವರು ಹೆಚ್ಚಿನ ಒತ್ತು ನೀಡಿದರು.
2015ರಲ್ಲಿ 2,200ರಷ್ಟಿದ್ದ ಉಷ್ಣಮಾರುತದಿಂದ ಸಾವುಗಳ ಸಂಖ್ಯೆ 2017ರಲ್ಲಿ 220ಕ್ಕೆ ಇಳಿದಿದ್ದು,ಇದಕ್ಕೆ ಮಾಹಿತಿ ಪ್ರಸಾರಣ,ಹೆಚ್ಚಿನ ಜಾಗ್ರತಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ತಳಮಟ್ಟದ ಪರಿಶ್ರಮ ಮುಖ್ಯ ಕಾರಣವಾಗಿದೆ ಎಂದು ರಾಷ್ಟ್ರೀಯ ವಿಕೋಪ ವ್ಯವಸ್ಥಾಪನಾ ಪ್ರಾಧಿಕಾರದ ಸದಸ್ಯ ಆರ್.ಕೆ.ಜೈನ್ ಅವರು ತಿಳಿಸಿದರು.







