ಕೊಲ್ಲರಕೋಡಿ ಮದ್ರಸಕ್ಕೆ ಕಲ್ಲೆಸೆತ ಪ್ರಕರಣ: ಇಬ್ಬರು ಆರೋಪಿಗಳ ಸೆರೆ

ಕೊಣಾಜೆ, ಮೇ 18: ನರಿಂಗಾನ ಗ್ರಾಮದ ಕೊಲ್ಲರಕೋಡಿ ಮದ್ರಸಕ್ಕೆ ಕಿಡಿಗೇಡಿಗಳು ಕಲ್ಲೆಸೆದು ಹಾನಿಗೊಳಿಸಿರುವ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಜೇಶ್ವರ ಮೂಲದ ಭರತ್ ಮತ್ತು ಮಿಥುನ್ ಎಂದು ಗುರುತಿಸಲಾಗಿದೆ.
ಕೊಲ್ಲರಕೋಡಿಯ ನೂರುಲ್ ಉಲೂಮ್ ಮದ್ರಸಕ್ಕೆ ಕಿಡಿಗೇಡಿಗಳು ಬೈಕ್‌ನಲ್ಲಿ ಬಂದು ಕಲ್ಲೆಸೆದಿದ್ದರು. ಈ ಸಂದರ್ಭ ಮದ್ರಸದ ಬಳಿ ಇದ್ದ ಅಬ್ದುಲ್ ಮಜೀದ್ ಎಂಬವರು ಗೊಬ್ಬೆ ಹೊಡೆದಾಗ ಅವರಿಗೂ ಆರೋಪಿಗಳು ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದರು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಮಂಜನಾಡಿ ಜಾತ್ರಾ ಉತ್ಸವಕ್ಕೆ ಬಂದು ಇದೇ ದಾರಿಯಲ್ಲಿ ಹಿಂದಿರುಗುವ ವೇಳೆ ಮದ್ರಸಕ್ಕೆ ಕಲ್ಲೆಸೆದು ಪರಾರಿಯಾಗಿದ್ದರು. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





