2011ರಲ್ಲಿ ಶಾಸಕರನ್ನು ಅನರ್ಹಗೊಳಿಸಿ ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದ ಬೋಪಯ್ಯ

ಬೆಂಗಳೂರು, ಮೇ 18: ಕರ್ನಾಟಕ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯರನ್ನು ರಾಜ್ಯಪಾಲರು ನೇಮಿಸಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸಂಪ್ರದಾಯದಂತೆ ಅತ್ಯಂತ ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಬೇಕು.ಆದರೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬೋಪಯ್ಯರಿಗಿಂತಲೂ ಆರ್.ವಿ.ದೇಶಪಾಂಡೆ ಹಿರಿಯ ಶಾಸಕರಾಗಿದ್ದಾರೆ. ಅವರನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.
ಬೋಪಯ್ಯ ಈ ಹಿಂದೆ 2009ರಿಂದ 2013ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. 2010ರ ಅಕ್ಟೋಬರ್‌ನಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲ್ಪಟ್ಟ ಸಂದರ್ಭ ಬಿಜೆಪಿಯ 11 ಬಂಡಾಯ ಶಾಸಕರು, ಐವರು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿ ಸರಕಾರ ಉಳಿಯಲು ಕಾರಣರಾಗಿದ್ದರು. ಇದನ್ನು ಪ್ರಶ್ನಿಸಿ ಅನರ್ಹಗೊಂಡಿರುವ ಶಾಸಕರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಸ್ಪೀಕರ್ ಆದೇಶವನ್ನು ಎತ್ತಿಹಿಡಿದಿತ್ತು. ಬಳಿಕ ಶಾಸಕರು ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದ್ದರು. ಸ್ಪೀಕರ್ ಆದೇಶವನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ನೇತೃತ್ವದ ನ್ಯಾಯಪೀಠವು ರದ್ದುಗೊಳಿಸಿತ್ತು.
ಸಾಂವಿಧಾನಿಕ ಮೌಲ್ಯ ಹಾಗೂ ಸಾಮಾಜಿಕ ನ್ಯಾಯದ ನಿಯಮವನ್ನು ಉಲ್ಲಂಘಿಸಿ ಬೋಪಯ್ಯ ತೀರ್ಪು ನೀಡಿದ್ದಾರೆ ಎಂದು ನ್ಯಾಯಪೀಠ ಛೀಮಾರಿ ಹಾಕಿತ್ತು. ಸದನದಲ್ಲಿ ಬಹುಮತ ಸಾಬೀತಿಗೆ ನಿಗದಿಯಾದ ದಿನದ ಮೊದಲೇ 16 ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ವಿಪರೀತ ಆತುರ ತೋರಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಅವಿಶ್ವಾಸ ನಿರ್ಣಯ ವಿಫಲವಾಗಬೇಕೆಂಬ ಇರಾದೆಯನ್ನು ಸ್ಪೀಕರ್ ಹೊಂದಿರುವುದನ್ನು ಇದು ಸ್ಪಷ್ಟಪಡಿಸಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿತ್ತು.





