ಮಾನವನ ಕೈ-ಕಾಲು ನ್ಯೂನತೆಗೆ ಕಾರಣವಾದ ಹೊಸ ಜೀನ್ ಪತ್ತೆ
ಮಣಿಪಾಲ ಕೆಎಂಸಿ ಸಂಶೋಧಕರ ತಂಡದ ಸಾಧನೆ

ಕಪ್ಪೆಗಳ ಮೇಲೆ ಸಂಶೋಧನೆ ನಡೆಸಿದಾಗ ಅವುಗಳಲ್ಲೂ ಕೈಕಾಲುಗಳ ನ್ಯೂನ್ಯತೆ ಕಂಡುಬಂದಿರುವುದು.
ಮಣಿಪಾಲ, ಮೇ 18: ಮನುಷ್ಯನ ಕೈ-ಕಾಲುಗಳ ನ್ಯೂನ್ಯತೆಗೆ ಕಾರಣವಾಗುವ ಹೊಸ ಅನುವಂಶಿಕ ದಾತು (ಜೀನ್)ನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮೆಡಿಕಲ್ ಜಿನೆಟಿಕ್ಸ್ ವಿಭಾಗವು, ಸಿಂಗಾಪುರದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಬಯಾಲಜಿ ಹಾಗೂ ಟರ್ಕಿಯ ಇಸ್ತಾಂಬುಲ್ ವಿವಿಯೊಂದಿಗೆ ನಡೆಸಿದ ಸಂಯುಕ್ತ ಸಂಶೋಧನೆಯ ವೇಳೆ ಈ ಜೀನ್ನ್ನು ಪತ್ತೆ ಹಚ್ಚಲಾಗಿದೆ ಎಂದು ಮಾಹೆ ವಿವಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಡಾ.ಗಿರೀಶ್ ಕಟ್ಟಾ ನೇತೃತ್ವದ ಮಣಿಪಾಲ ತಂಡದಲ್ಲಿ ಡಾ.ಅಂಜು ಶುಕ್ಲಾ ಹಾಗೂ ಡಾ.ಶಾಲಿನಿ ಎಸ್.ನಾಯಕ್ ಇದ್ದು, ಇವರು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡದೊಂದಿಗೆ ಸೇರಿ ಕೈಕಾಲು ಮೂಳೆಗಳಲ್ಲಿ ಕಂಡುಬರುವ ನ್ಯೂನ್ಯತೆಗೆ ಕಾರಣವಾಗುವ ಪರಿವರ್ತಿತ ಆರ್ಎಸ್ಪಿಒ2 ಜೀನ್ನ್ನು ಪತ್ತೆ ಹಚ್ಚಿದ್ದಾರೆ.
ಈ ಸಂಶೋಧನೆಯ ಕುರಿತು ಮಾಹಿತಿಗಳನ್ನು ನೀಡಿದ ಕೆಎಂಸಿ ಮಣಿಪಾಲದ ಡೀನ್ ಡಾ. ಪ್ರಜ್ಞಾ ರಾವ್, ಗರ್ಭಪಾತದ ವೇಳೆ ಪಡೆದ ಭ್ರೂಣವನ್ನು ತಮ್ಮ ಕ್ಲಿನಿಕಲ್ ಪರೀಕ್ಷೆಗಾಗಿ ಪಡೆದ ವೈದ್ಯರ ತಂಡ ಇದನ್ನು ಪತ್ತೆ ಹಚ್ಚಿತು. ನಿಕಟ ಸಂಬಂಧದಲ್ಲಿ ಮದುವೆಯಾದ ದಂಪತಿಗಳ ಸತತ ಮೂರು ಭ್ರೂಣಗಳು ಭಾಗಶ: ಕೈ-ಕಾಲುಗಳನ್ನು ಹೊಂದಿಲ್ಲದಿರುವುದು, ಅವುಗಳ ಎಡತುಟಿ ಹಾಗೂ ಇತರ ಅಂಗಗಳಲ್ಲಿ ಮತ್ತು ಶ್ವಾಸಕೋಶಗಳಲ್ಲಿ ನ್ಯೂನ್ಯತೆಗಳು ಇರುವುದನ್ನು ಪತ್ತೆ ಹಚ್ಚಿತ್ತು. ಬಳಿಕ ಈ ಬಗ್ಗೆ ಉಳಿದ ವಿವಿಗಳೊಂದಿಗೆ ಸೇರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಇದೇ ರೀತಿಯ ಕುಟುಂಬಗಳನ್ನು ಸಂಶೋಧನೆಗೆ ಒಳಪಡಿಸಿದಾಗ ಈ ರೋಗಕ್ಕೆ ಕಾರಣಗಳನ್ನು ಪತ್ತೆ ಹಚ್ಚಲಾಯಿತು ಎಂದು ಅವರು ತಿಳಿಸಿದರು.
ವಿಶ್ವದ ವಿವಿಧ ಭಾಗಗಳ ಐದು ಕುಟುಂಬಗಳ 11 ರೋಗಿಗಳನ್ನು ಇದಕ್ಕಾಗಿ ಪರೀಕ್ಷೆಗೊಳಪಡಿಸಲಾಗಿದ್ದು, ಇವರಲ್ಲಿ ಕಾಲು ಅಥವಾ ಕೈ ಮೇಲಿನ ಅಥವಾ ಕೆಳಗಿನ ಭಾಗದ ನ್ಯೂನ್ಯತೆ, ಚಿಕ್ಕ ಶ್ವಾಸಕೋಶ ಹಾಗೂ ಮೇಲಿನ ಅಥವಾ ಕೆಳಗಿನ ತುಟಿಯಲ್ಲಿ ನ್ಯೂನ್ಯತೆಯನ್ನು ಕಂಡುಕೊಳ್ಳಲಾಗಿದೆ. ತಂಡದ ಈ ಸಂಶೋಧನೆಯನ್ನು ವಿಶ್ವದ ಪ್ರತಿಷ್ಠಿತ ಜರ್ನಲ್ ‘ನೇಚರ್’ನಲ್ಲಿ ಪ್ರಕಟಿಸಲಾಗಿದೆ.
‘ಅಧ್ಯಯನವು ಕೇವಲ ಮಾನವನ ಕೈಕಾಲುಗಳ ಅಸಹಜತೆ ಅಥವಾ ಟೆಟ್ರಾ ಅಮಿಲಿಯಾ ಸಿಂಡ್ರೋಮ್ಗೆ ಕಾರಣವನ್ನು ಪತ್ತೆ ಹಚ್ಚಿದ್ದು ಮಾತ್ರವಲ್ಲದೇ, ಆರ್ಎಸ್ಪಿಒ2 ಜೀನ್ ಪರಿವರ್ತನೆಗೊಳಗಾಗಿ ಈ ನ್ಯೂನ್ಯತೆಗಳಿಗೆ ಕಾರಣವಾಗುತ್ತವೆ ಎಂಬ ಅಂಶಗಳನ್ನೂ ವಿವರಿಸಲಾಗಿದೆ ಎಂದು ಕೆಎಂಸಿ ಸಂಶೋಧಕರ ತಂಡದ ನೇತೃತ್ವ ವಹಿಸಿದ್ದ ಡಾ.ಗಿರೀಶ್ ವಿವರಿಸಿದರು.
ಅಲ್ಲದೇ ಇದೇ ಜೀನ್ ಹೇಗೆ ಲಿಂಬ್ ಮತ್ತು ಶ್ವಾಸಕೋಶಗಳ ಬೆಳವಣಿಗೆ ಯಲ್ಲಿ ತಡೆಯನ್ನು ಉಂಟು ಮಾಡುತ್ತದೆ ಎಂಬುದನ್ನು ಇಲಿ ಹಾಗೂ ಕಪ್ಪೆಗಳ ಮೇಲೆ ನಡೆಸಿದ ಪ್ರಯೋಗಗಳ ವೇಳೆ ಕಂಡುಕೊಳ್ಳಲಾಗಿದೆ ಎಂದು ಡಾ. ಗಿರೀಶ್ ನುಡಿದರು. ತಮ್ಮ ಈ ಸಂಶೋದನೆಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯೂ ಆರ್ಥಿಕ ಸಹಾಯ ಒದಗಿಸಿದೆ ಎಂದರು.
ಮಾಹೆ ವಿವಿಯ ಉಪಕುಲಪತಿ ಡಾ.ವಿನೋದ್ ಭಟ್, ಪ್ರೊ ವೈಸ್ ಚಾನ್ಸಲರ್ ಡಾ. ಪೂರ್ಣಿಮಾ ಬಾಳಿಗಾ ಹಾಗೂ ಸಂಶೋಧನಾ ನಿರ್ದೇಶಕ ಡಾ. ಎನ್.ಉಡುಪ ಅವರು ತಂಡದ ಸಂಶೋಧನೆಯನ್ನು ಶ್ಲಾಘಿಸಿದ್ದಾರೆ.







