ಬೆಂಗಳೂರು: ರೌಡೀಶೀಟರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ

ಬೆಂಗಳೂರು, ಮೇ 18: ಕಳ್ಳತನ ಪ್ರಕರಣಯೊಂದರ ಸಂಬಂಧ ಸ್ನೇಹಿತರೊಂದಿಗೆ ಜಗಳ ನಡೆದು ರೌಡೀಶೀಟರ್‌ನೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಇಲ್ಲಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಕೋಲಾರ ಮೂಲದ ಬಾಣಸವಾಡಿಯ ಜಾನಕಿರಾಮ್ ಲೇಔಟ್‌ನ ಚಲ್ಲಕುಮಾರ್(32) ಕೊಲೆಯಾದ ರೌಡಿಶೀಟರ್ ಎಂದು ತಿಳಿದುಬಂದಿದೆ.
ಕಳ್ಳತನ, ದರೋಡೆ, ಹಲ್ಲೆ ಸೇರಿದಂತೆ ವಿವಿಧ ಅಪರಾಧ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದ ಚಲ್ಲಕುಮಾರ್ ವಿರುದ್ಧ ಬಾಣಸವಾಡಿ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿ 45ಕ್ಕೂ ಅಧಿಕ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ರೌಡಿಪಟ್ಟಿ ತೆರೆಯಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಲ್ಲಕುಮಾರ್ ಸ್ನೇಹಿತರೊಂದಿಗೆ ಸೇರಿಕೊಂಡು ಮನೆಗಳ್ಳತನ ಮಾಡುತ್ತಿದ್ದ. ಬಂದ ಹಣವನ್ನು ಸ್ನೇಹಿತರೆಲ್ಲರೂ ಸಮವಾಗಿ ಹಂಚಿಕೆ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಮನೆಗೆ ಕನ್ನ ಹಾಕಿ ಬಂದ ಹಣದಲ್ಲಿ ಹೆಚ್ಚಿನ ಪಾಲು ಚಲ್ಲಕುಮಾರ್ ಇಟ್ಟುಕೊಂಡು, ತನ್ನ ಸ್ನೇಹಿತರಿಗೆ ಸ್ವಲ್ಪ ಪ್ರಮಾಣದಲ್ಲಿ ಹಣ ನೀಡಿದ್ದ. ಈ ವಿಚಾರ ಈತನ ಸ್ನೇಹಿತ ನಾಗರಾಜ್ ಇತರರಿಗೂ ಈ ವಿಚಾರ ತಿಳಿಸಿದ್ದ. ಇದರಿಂದ ಆಕ್ರೋಶಗೊಂಡ ಸ್ನೇಹಿತರು ಚಲ್ಲಕುಮಾರ್‌ನನ್ನು ಈ ಬಗ್ಗೆ ಪ್ರಶ್ನಿಸಿದಾಗ ಆತ ಹಣ ನೀಡುವುದಿಲ್ಲವೆಂದು ತಿಳಿಸಿದ್ದ. ಈ ವಿಚಾರವಾಗಿ ಇಬ್ಬರ ಮದ್ಯೆ ಜಗಳ ನಡೆದು ಸ್ನೇಹಿತರು ಈತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಹೇಳಲಾಗುತ್ತಿದೆ.
ಗುರುವಾರ ರಾತ್ರಿ 11ರಲ್ಲಿ ಚಲ್ಲಕುಮಾರ್ ತನ್ನ ಕಾರಿನಲ್ಲಿ ಇಬ್ಬರು ಸ್ನೇಹಿತರೊಂದಿಗೆ ಕೋಲಾರಕ್ಕೆ ತೆರಳುತ್ತಿದ್ದ. ಈ ವಿಚಾರ ತಿಳಿದ ಈತನ ಆರು ಮಂದಿ ಸ್ನೇಹಿತರು ವರ್ತೂರಿನ ಕೊಟ್ಟಿ ಗೇಟ್ ಬಳಿ ಕಾರನ್ನು ಅಡ್ಡಗಟ್ಟಿ ಚಲ್ಲಕುಮಾರ್‌ನನ್ನು ಕಾರಿನಿಂದ ಹೊರಗೆಳೆದು ಮಾರಕಾಸಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಧಾವಿಸಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







