ಮೇ 19 ರಂದು ವಿಧಾನಸಭೆ ಅಧಿವೇಶನ: ವಿಧಾನಸಭೆಯ ಕಾರ್ಯದರ್ಶಿ ಎಸ್.ಮೂರ್ತಿ

ಬೆಂಗಳೂರು, ಮೇ 18: ರಾಜ್ಯಪಾಲರ ಸೂಚನೆಯಂತೆ 15ನೆ ವಿಧಾನಸಭೆಯ ಮೊದಲ ಅಧಿವೇಶನವನ್ನು ಶನಿವಾರ(ಮೇ 19) ಬೆಳಗ್ಗೆ 11 ಗಂಟೆಗೆ ಕರೆಯಲಾಗಿದೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಸ್.ಮೂರ್ತಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದಂತೆ ಈಗಾಗಲೆ ಹಂಗಾಮಿ ಸ್ಪೀಕರ್ ನೇಮಕವಾಗಿದೆ. ಅವರ ಸೂಚನೆಯಂತೆ ಸದನದ ನಡವಳಿಕೆಗಳು ಸಾಗಲಿವೆ ಎಂದರು.
ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ಚುನಾಯಿತ ಜನಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ಮುಗಿಸಬೇಕಿದೆ. ನಾಲ್ಕು ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸಮತ ಯಾಚನೆಯ ಪ್ರಸ್ತಾವನೆಯನ್ನು ಸದನದಲ್ಲಿ ಮಂಡನೆ ಮಾಡಲಿದ್ದಾರೆ. ಆನಂತರ, ಪ್ರಸ್ತಾವನೆಯ ಪರ ಹಾಗೂ ವಿರೋಧ ಇರುವವರ ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು.
ಈಗಾಗಲೆ ಎಲ್ಲ ಚುನಾಯಿತ ಜನಪ್ರತಿನಿಧಿಗಳಿಗೆ ಸಮನ್ಸ್ ನೀಡಲಾಗಿದ್ದು, ನಾಳೆ ಸದನಕ್ಕೆ ಹಾಜರಾಗುವಾಗ ಗುರುತಿನ ಚೀಟಿ ಹಾಗೂ ಚುನಾವಣಾ ಆಯೋಗವು ನೀಡಿರುವ ಪ್ರಮಾಣ ಪತ್ರವನ್ನು ತಮ್ಮ ಜೊತೆಯಲ್ಲಿ ಕಡ್ಡಾಯವಾಗಿ ತರಬೇಕು ಎಂದು ಮೂರ್ತಿ ತಿಳಿಸಿದರು.
ವಿಶ್ವಾಸಮತಯಾಚನೆಗೆ ಮುನ್ನ ಸದನದ ಬಾಗಿಲುಗಳನ್ನು ಮುಚ್ಚಲಾಗುವುದು. ಆನಂತರ, ಪ್ರಸ್ತಾವನೆಯನ್ನು ಮತಕ್ಕೆ ಹಾಕಲಾಗುವುದು. ಪ್ರಸ್ತಾವನೆಯ ಪರವಾಗಿರುವವರು ಮೊದಲು ಎದ್ದು ನಿಲ್ಲಬೇಕು, ಆಗ ಅವರ ಹೆಸರುಗಳನ್ನು ಬರೆದುಕೊಳ್ಳಲಾಗುವುದು. ಆನಂತರ, ಪ್ರಸ್ತಾವದ ವಿರೋಧ ಇರುವವರಿಗೆ ಅವಕಾಶ ನೀಡಲಾಗುವುದು. ಒಂದು ವೇಳೆ ಪರ ಹಾಗೂ ವಿರೋಧವಾಗಿ ಸರಿಸಮಾನವಾದ ಮತಗಳು ಬಂದರೆ ಆಗ ಹಂಗಾಮಿ ಸ್ಪೀಕರ್ ಮತ ಚಲಾಯಿಸಬಹುದು ಎಂದು ಮೂರ್ತಿ ಹೇಳಿದರು.







