ಕರ್ನಾಟಕದ ರಾಜ್ಯಪಾಲರು ಕೇಂದ್ರದ ಒತ್ತಡದಡಿ ಕಾರ್ಯ ನಿರ್ವಹಿಸುತ್ತಿದ್ದಾರೆ: ಅಶೋಕ್ ಚವಾಣ್

ಮುಂಬೈ,ಮೇ 18: ಸರಕಾರ ರಚನೆಗೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಆಹ್ವಾನಿಸುವ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರ ನಿರ್ಧಾರವು ಮೋದಿ ನೇತೃತ್ವದ ಕೇಂದ್ರ ಸರಕಾರದ ಒತ್ತಡದಡಿ ರಾಜ್ಯಪಾಲರು ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತಿದೆ ಎಂದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ್ ಚವಾಣ್ ಅವರು ಶುಕ್ರವಾರ ಇಲ್ಲಿ ಹೇಳಿದರು.
ವಾಲಾ ಅವರ ನಿರ್ಧಾರವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ದೇಶವ್ಯಾಪಿ ಹಮ್ಮಿಕೊಂಡಿದ್ದ ‘ಪ್ರಜಾಪ್ರಭುತ್ವವನ್ನು ಉಳಿಸಿ ದಿನ’ದ ಅಂಗವಾಗಿ ಬೃಹನ್ಮುಂಬೈ ಮಹಾನಗರ ಪಾಲಿಕೆ ಸಮೀಪ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅವರು,ಕರ್ನಾಟಕದಲ್ಲಿ ರಾಜಭವನದಿಂದ ರಾಜಕೀಯವು ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯಪಾಲರ ಪಾತ್ರವು ತಟಸ್ಥ ಮತ್ತು ನಿಷ್ಪಕ್ಷಪಾತವಾಗಿರಬೇಕು. ಆದರೆ ದುರದೃಷ್ಟವಶಾತ್ ಕರ್ನಾಟಕದಲ್ಲಿ ಹೀಗೆ ನಡೆಯುತ್ತಿಲ್ಲ ಎಂದು ಹೇಳಿದ ಅವರು,ಕರ್ನಾಟಕ ವಿಧಾನಸಭೆಯಲ್ಲಿ ಶನಿವಾರ ಬಲಾಬಲ ಪರೀಕ್ಷೆಗೆ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದರು.





