ದಾವಣಗೆರೆ: ರಾಜ್ಯಪಾಲರ ವಿರುದ್ಧ ಸಿಪಿಐಎಂ ಪ್ರತಿಭಟನೆ

ದಾವಣಗೆರೆ,ಮೇ.18: ಬಹುಮತವಿಲ್ಲದ ಯಡಿಯೂರಪ್ಪಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು, ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟ ರಾಜ್ಯಪಾಲ ವಜುಬಾಯಿ ವಾಲಾ ಸಂವಿಧಾನ ವಿರೋಧಿ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಶುಕ್ರವಾರ ಸಿಪಿಐಎಂ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಯದೇವ ವೃತ್ತದಲ್ಲಿ ಪಕ್ಷದ ಮುಖಂಡ ಕೆ.ಎಲ್. ಭಟ್ ನೇತೃತ್ವದಲ್ಲಿ, ಬಹುಮತವಿಲ್ಲದ ಬಿಜೆಪಿಗೆ ಪ್ರಮಾಣ ವಚನಕ್ಕೆ ರಾಜ್ಯಪಾಲ ವಜುಬಾಯಿ ವಾಲಾ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗುವ ಮೂಲಕ ಪಕ್ಷದ ಮುಖಂಡರು, ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕೆ. ಲಕ್ಷ್ಮಿನಾರಾಯಣ ಭಟ್, ರಾಜ್ಯಪಾಲ ವಜುಬಾಯಿ ವಾಲಾ ಅಧಿಕಾರವನ್ನು ದುರುಪಯೋಗಪಡಿಸಿಕೊಂಜು, ಕೇವಲ ಶೇ. 36ರಷ್ಟು ಮಾತ್ರವೇ ಬಹುಮತ ಪಡೆದ ಬಿಜೆಪಿ ಸರ್ಕಾರ ರಚಿಸಲು ಆಹ್ವಾನಿಸಿ, ಬಿಜೆಪಿ ಶಾಸಕಾಂಗ ನಾಯಕ ಬಿ.ಎಸ್. ಯಡಿಯೂರಪ್ಪಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಿದ್ದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ದೂರಿದರು.
ಶೇಕಡಾ 52ಕ್ಕೂ ಹೆಚ್ಚು ಜನಮತವಿರುವ ಮತ್ತು ಅಗತ್ಯ ಸಂಖ್ಯಾಬಲ ಹೊಂದಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗೆ ಅವಕಾಶ ನೀಡದೇ ರಾಜ್ಯಪಾಲರು ಪ್ರಜಾಪ್ರಭುತ್ವ ವಿರೋಧಿ ನಿಲುವು ಅನುಸರಿಸಿದ್ದಾರೆ. ರಾಜ್ಯಪಾಲ ವಜುಬಾಯಿ ವಾಲಾರ ಇಂತಹ ನಡೆಯನ್ನು ಖಂಡಿಸಿ ರಾಜ್ಯಾದ್ಯಂತ ಸಿಪಿಐಎಂನಿಂದ ಇಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದ ಅವರು, ತಕ್ಷಣವೇ ರಾಜ್ಯಪಾಲರು ತಮ್ಮ ಆದೇಶವನ್ನು ರದ್ದುಪಡಿಸಬೇಕು. ಕುದುರೆ ವ್ಯಾಪಾರಕ್ಕೆ ಮುಂದಾಗಿರುವ ಬಿಜೆಪಿಯವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಶೇ.52 ಮತ ಗಳಿಸಿರುವ ಮತ್ತು ಅಗತ್ಯ ಸಂಖ್ಯಾ ಬಲ ಹೊಂದಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರಚಿಸಲು ಅನುವು ಮಾಡಿಕೊಡಬೇಕು. ಈ ಬಗ್ಗೆ ಯಾವುದೇ ಉದಾಸೀನ ಬೇಡ ಎಂದು ತಿಳಿಸಿದರು.
ಹಿಟ್ಲರ್ ಶಾಹಿ, ಫ್ಯಾಸಿಸ್ಟ್ ಧೋರಣೆಯತ್ತ ಹೊರಟಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಗಳ ನೀತಿಗಳ ವಿರುದ್ಧ ಜನತೆ ಹೋರಾಟಕ್ಕೆ ಮುಂದಾಗಬೇಕು. ಜಾಗತೀಕರಣವನ್ನು ಜಾರಿಗೊಳಿಸಲು ಕೋಮುವಾದವನ್ನು ಮುಂಚೂಣಿಗೆ ತರುವ ಪಿತೂರಿ ವಿಫಲಗೊಳಿಸಬೇಕು. ಈ ಹಿನ್ನೆಲೆಯಲ್ಲಿ ದೇಶದ ಜನತೆ ಇನ್ನಾದರೂ ಜಾಗೃತರಾಗಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಟಿ.ಬಿ. ರೇಣುಕಮ್ಮ, ಶ್ರೀನಿವಾಸಮೂರ್ತಿ, ಆನಂದರಾಜ, ಇ. ಶ್ರೀನಿವಾಸ, ಜಯಣ್ಣ ಜಾಧವ್, ಕೋಮು ಸೌಹಾರ್ದ ವೇದಿಕೆ ಮುಖಂಡ, ವಕೀಲ ಅನೀಸ್ ಪಾಷಾ ಮತ್ತಿತರರಿದ್ದರು.







