ಮಡಿಕೇರಿ: ಪ್ರವಾಸಿಗರನ್ನು ಅಡ್ಡಗಟ್ಟಿ ಭಯ ಮೂಡಿಸುತ್ತಿದ್ದ ನಾಲ್ವರು ಆರೋಪಿಗಳ ಬಂಧನ

ಮಡಿಕೇರಿ,ಮೇ.18: ರಾತ್ರಿ ವೇಳೆ ಮಡಿಕೇರಿ ನಗರಕ್ಕೆ ಆಗಮಿಸುವ ಪ್ರವಾಸಿಗರನ್ನು ಏಕಾಏಕಿ ರಸ್ತೆಗಳಲ್ಲಿ ಅಡ್ಡಗಟ್ಟಿ ತಾವು ಹೇಳಿದ ಹೋಂಸ್ಟೇಗೆ ಬರುವಂತೆ ಒತ್ತಾಯಿಸಿ ಭಯದ ವಾತಾವರಣವನ್ನು ಉಂಟು ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ನಾಲ್ವರು ಅರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ರಿಜ್ವಾನ್ ಎಂ.ಹೆಚ್, ಝೈನುದ್ದೀನ್, ಮುಸ್ತಫ ಹಾಗೂ ರಾಜೇಶ್ ಕೆ. ಎಂದು ಗುರುತಿಸಲಾಗಿದೆ.
ಮೇ 10ರಂದು ಬೆಳಗಿನ ಜಾವ 2 ಗಂಟೆಗೆ ಮಡಿಕೇರಿ ನಗರದ ಫೋರ್ಟ್ ವ್ಯೂ ಲಾಡ್ಜ್ ಗೆ ಹೋದ ಕೆಲವು ಪ್ರವಾಸಿಗರನ್ನು ಅಶ್ರಫ್ ಎಂಬ ಹೋಂ ಸ್ಟೇ ಮಧ್ಯವರ್ತಿ ಫೋರ್ಟ್ ವ್ಯೂ ಲಾಡ್ಜ್ ನ ಕಾಂಪೌಂಡ್‍ನ ಒಳಗೆ ಹೋಗಿ ಪ್ರವಾಸಿಗರು ತನ್ನೊಂದಿಗೆ ಹೋಂಸ್ಟೇಗೆ ಬರಬೇಕೆಂದು ಒತ್ತಾಯಿಸಿದ್ದನೆನ್ನಲಾಗಿದೆ. ಈ ವಿಚಾರವಾಗಿ ಫೋರ್ಟ್ ವ್ಯೂ ಲಾಡ್ಜ್ ವ್ಯವಸ್ಥಾಪಕ ಜುಬೇರ್ ಎಂಬವರು ಅಶ್ರಫ್‍ರವರನ್ನು ಪ್ರಶ್ನಿಸಿದಾಗ ಅಶ್ರಫ್, ಜುಬೇರ್ ರವರಿಗೆ ಬೈದು ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾಗಿ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದೇ ರೀತಿ ಮೇ 16 ರಂದು ರಿಜ್ವಾನ್ ಎಂ.ಹೆಚ್, ಝೈನುದ್ದೀನ್, ಮುಸ್ತಫ ಹಾಗೂ ರಾಜೇಶ್ ಕೆ. ಮುಂತಾದವರು ಮಡಿಕೇರಿ ನಗರದಲ್ಲಿ ಹೋಂ ಸ್ಟೇಗಾಗಿ ಗಿರಾಕಿಗಳನ್ನು ಹುಡುಕುತ್ತಾ ಪ್ರವಾಸಿಗರನ್ನು ಅಡ್ಡಗಟ್ಟಿ ಭಯದ ವಾತಾವರಣ ಮೂಡಿಸುತ್ತಿದ್ದುದನ್ನು ಗಮನಿಸಿ ಅವರಿಗೆ ಪೊಲೀಸ್ ಠಾಣೆಯಲ್ಲಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಆದರೂ ಸಹ ರಿಜ್ವಾನ್ ಎಂ.ಹೆಚ್, ಜೈನುದ್ದೀನ್, ಮುಸ್ತಫ, ರಾಜೇಶ್ ಕೆ ಅವರು ಗುರುವಾರ ಬೆಳಗಿನ ಜಾವ ಮತ್ತೆ ಮಡಿಕೇರಿ ನಗರಕ್ಕೆ ರಾತ್ರಿ ವೇಳೆ ಬರುವಂತಹ ಪ್ರವಾಸಿಗರನ್ನು ರಸ್ತೆಗಳಲ್ಲಿ ಏಕಾಏಕಿ ಅಡ್ಡಗಟ್ಟಿ ತಮ್ಮೊಂದಿಗೆ ಬರುವಂತೆ ಒತ್ತಾಯಿಸಿ ಪ್ರವಾಸಿಗರಿಗೆ ಭಯದ ವಾತಾವರಣ ಉಂಟು ಮಾಡಿದ್ದಾಗಿ ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್ ಅವರು ತಿಳಿಸಿದ್ದಾರೆ.
ಮಡಿಕೇರಿ ನಗರದಲ್ಲಿ ಯಾವುದೇ ಸಮಯದಲ್ಲಿ ಯಾರೇ ಹೋಂ ಸ್ಟೇ ಮಧ್ಯವರ್ತಿಗಳು ಪ್ರವಾಸಿಗರನ್ನು ಅಡ್ಡಗಟ್ಟಿ ತೊಂದರೆ ನೀಡುವುದು ಕಂಡು ಬಂದಲ್ಲಿ ಸಾರ್ವಜನಿಕರು ಮಡಿಕೇರಿ ನಗರ ಪೊಲೀಸ್ ಠಾಣೆಗೆ (08272-229333), ಪಿಎಸ್‍ಐ ಮಡಿಕೇರಿ ನಗರ ಠಾಣೆ (9480804945) ಅಥವಾ ಪೊಲೀಸ್ ಕಂಟ್ರೋಲ್ ರೂಂ (08272-229330)ಗೆ ಮಾಹಿತಿ ನೀಡಿದರೆ ಕಾನೂನು ಉಲ್ಲಂಘಿಸಿ ವರ್ತಿಸುವ ಹೋಂ ಸ್ಟೇ ಮಧ್ಯವರ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.







