ಮೈಸೂರು: ರಾಜ್ಯಪಾಲರ ವಿರುದ್ಧ ಸಾಹಿತಿ ಪ್ರೊ.ಭಗವಾನ್ ಆಕ್ರೋಶ

ಮೈಸೂರು,ಮೇ.18: ಬಹುಮತ ಸಾಬೀತಿಗೆ ಬಿಜೆಪಿಗೆ ನೀಡಿರುವ ಕಾಲಾವಾಕಾಶವು ದುರುದ್ದೇಶಪೂರ್ವಕವಾಗಿದ್ದು, ಸಂವಿಧಾನ ವಿರೋಧಿ ನಡೆಯನ್ನು ರಾಜ್ಯಪಾಲ ವಜೂಬಾಯಿ ವಾಲ ಅನುಸರಿಸಿದ್ದಾರೆ ಎಂದು ಪ್ರಗತಿಪರ ಚಿಂತಕ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಪಾಲ ವಜುಬಾಯಿ ವಾಲಾ ಅವರ ನಡೆ ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹೈಕಮಾಂಡ್ ಅಮಿತ್ ಶಾ ಅವರ ಒತ್ತಡಕ್ಕೆ ಮಣಿದು ಪೂರ್ಣ ಬಹುಮತವಿಲ್ಲದ ಬಿಜೆಪಿ ಗೆ ಸರಕಾರ ರಚಿಸಲು ಆಹ್ವಾನ ನೀಡಿರುವುದು ಸಂವಿಧಾನಕ್ಕೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್-ಕಾಂಗ್ರೆಸ್ ಗೆ 117 ಜನ ಶಾಸಕರ ಬೆಂಬಲವಿದ್ದರೂ ಸರಕಾರ ರಚಿಸಲು ಅವಕಾಶ ನೀಡದ ರಾಜ್ಯಪಾಲರ ನಡೆ ಸಂವಿಧಾನ ವಿರೋಧಿಯಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವುದು ಅನಿವಾರ್ಯ ಎಂದು ಹೇಳಿದರು. ರಾಜ್ಯಪಾಲರು ಇರುವ ರಾಜಭವನವನ್ನು ರಾಜ್ಯಭವನವೆಂದು ನಾಮಕರಣ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಜೆಡಿಎಸ್ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮತಯಂತ್ರಕ್ಕಾಗಿ ಬಿಜೆಪಿ ಬಳಸುತ್ತಿದೆ. ಇಂದಿನ ಪ್ರಧಾನಿ ಮೋದಿಯವರ ಸರ್ವಾಧಿಕಾರದ ಧೋರಣೆಯು 2019ರ ಸಂಸತ್ ಚುನಾವಣೆಯ ಜನಾಂದೋಲನಕ್ಕೆ ಪ್ರೇರಣೆಗೆ ನಾಂದಿ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಶ್ರೀನಿವಾಸ್ ಮತ್ತು ವಕೀಲ ರವೀಂದ್ರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.







